ಧರ್ಮದ ಉಳಿವಿಗೆ ಒಗ್ಗೂಡಿದ್ದಾರೆ ಜನತೆ

1sor2
ಸೊರಬದ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ಧರ್ಮಸ್ಥಳ ಚಲೋ ರ‌್ಯಾಲಿಯ ನೇತೃತ್ವವಹಿಸಿ ಮಾತನಾಡಿದರು. ಜಾನಕಪ್ಪ ಒಡೆಯರ್ ಯಲಸಿ, ಸುರೇಶ್ ಉದ್ರಿ, ವಿಜೇಂದ್ರಗೌಡ, ಪಾಣಿ ರಾಜಪ್ಪ, ವಿ.ಪಿ.ಬಸವರಾಜ ಶಿವಪುರ ಇತರರಿದ್ದರು.
Published on

ಸೊರಬ: ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆಶೀರ್ವಾದದಿಂದ ಅಪಪ್ರಚಾರ ಮತ್ತು ಷಡ್ಯಂತ್ರದ ಬಣ್ಣ ಬಯಲಾಗುತ್ತಿದೆ. ನಾಡಿನ ಜನತೆ ಪ್ರಕರಣದ ಸೂಕ್ಷ್ಮತೆ ಗಮನಿಸಿ ಹಿಂದು ಧರ್ಮದ ಉಳಿವಿಗೆ ಒಗ್ಗಟ್ಟಾಗಿದ್ದಾರೆ ಎಂದು ಸಮಾಜ ಸೇವಕ ಹಾಗೂ ಬಿಜೆಪಿ ಮುಖಂಡ ಡಾ. ಎಚ್.ಇ.ಜ್ಞಾನೇಶ್ ಹೇಳಿದರು.

ಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಮುಂಭಾಗ ಸೋಮವಾರ ಬಿಜೆಪಿಯಿಂದ ಆಯೋಜಿಸಿದ್ದ ಧರ್ಮಸ್ಥಳ ಚಲೋ ರ‌್ಯಾಲಿ ನೇತೃತ್ವ ವಹಿಸಿ ಮಾತನಾಡಿದರು.

ಹಿಂದು ಧಾರ್ಮಿಕ ಕೇಂದ್ರಗಳಿಗೆ ಕಳಂಕ ತರುವ ಯತ್ನವನ್ನು ದುಷ್ಟ ಶಕ್ತಿಗಳು ಮಾಡುತ್ತಿವೆ. ಕೋಟ್ಯಂತರ ಭಕ್ತರು ಶ್ರೀ ಮಂಜುನಾಥ ಮತ್ತು ಅಣ್ಣಪ್ಪ ಸ್ವಾಮಿಯನ್ನು ನಂಬಿದ್ದಾರೆ. ಪವಿತ್ರ ಕ್ಷೇತ್ರಕ್ಕೆ ಧಕ್ಕೆ ತರಲು ಷಡ್ಯಂತ್ರ ರೂಪಿಸಿದವರ ಮುಖವಾಡ ಒಂದೊಂದಾಗಿ ಕಳಚಿ ಬೀಳುತ್ತಿದೆ ಎಂದರು.

ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಿಂದಲೂ ಕಾರ್ಯಕರ್ತರು ಧರ್ಮಸ್ಥಳ ಚಲೋ ರ‌್ಯಾಲಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಪಪ್ರಚಾರಕ್ಕೆ ನಡೆದ ಯತ್ನದಿಂದ ಭಕ್ತರ ಮನಸ್ಸಿಗೆ ಘಾಸಿ ಒಂದೆಡೆಯಾದರೆ, ಮತ್ತೊಂದೆಡೆ ಆರೋಪಗಳೆಲ್ಲ ಸುಳ್ಳು ಎನ್ನುವಂತಾಗಿರುವುದರಿಂದ ಮತ್ತಷ್ಟು ನಂಬಿಕೆ ಹೆಚ್ಚಿದೆ ಎಂದರು.

ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಜಾನಕಪ್ಪ ಒಡೆಯರ್, ಸುರೇಶ್, ಉಪಾಧ್ಯಕ್ಷ ವಿಜೇಂದ್ರ ಗೌಡ, ಪಾಣಿ ರಾಜಪ್ಪ, ವಿ.ಪಿ.ಬಸವರಾಜ, ರಾಜು, ನಂದೀಶ, ಶರತ್ ಗೌಡ, ಚಂದ್ರಪ್ಪ, ಪಾಲಾಕ್ಷಪ್ಪ ಇತರರಿದ್ದರು. ನಂತರ ವಾಹನಗಳ ಮೂಲಕ ಧರ್ಮಸ್ಥಳಕ್ಕೆ ತೆರಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net