

ಕುಶಾಲನಗರ: ಯುವ ಪೀಳಿಗೆಗೆ ಧರ್ಮದ ಅರಿವು ಮೂಡಿಸಲು ಪೂಜೆ-ಪುನಸ್ಕಾರಗಳು ಅವಶ್ಯ. ಪೂಜಾ ವಿಧಿ-ವಿಧಾನಗಳ ನಂತರ ಅದರ ವಿವರಣೆ ನೀಡಿ ಅರ್ಥ ಮಾಡಿಸುವ ದೊಡ್ಡ ಜವಾಬ್ದಾರಿ ಹಿರಿಯರ ಮೇಲಿದೆ ಎಂದು ಕುಶಾಲನಗರ ರಿಜಿಡ್ ಗ್ರೂಪ್ ನಿರ್ದೇಶಕ ವಿ.ಆರ್.ಮಂಜುನಾಥ್ ಸಲಹೆ ನೀಡಿದರು.
ಕುಶಾಲನಗರದ ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶನಿವಾರ ರಿಜಿಡ್ ಗ್ರೂಪ್ ವತಿಯಿಂದ ಆಯೋಜಿಸಿದ್ದ ‘ಶನಿ ದೇವರ ಕಥಾ ಶ್ರವಣ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚೆಗೆ ದೊಡ್ಡವರು ಚಿಕ್ಕವರು ಎನ್ನದೆ ಎಲ್ಲರೂ ಮೊಬೈಲ್ನಲ್ಲಿ ಮುಳುಗಿ ಹೋಗಿರುತ್ತಾರೆ. ಮನೆಯಲ್ಲಿ ಇದ್ದರು, ದೇವಸ್ಥಾನದಲ್ಲಿ ಇದ್ದರು ಕೇವಲ ಮೊಬೈಲ್ ಮಾತ್ರ ಸರ್ವಸ್ವವಾಗಿರುತ್ತದೆ. ಧರ್ಮ, ಆಚಾರ, ವಿಚಾರಗಳ ಬಗ್ಗೆ ಜ್ಞಾನ ಇರುವವರು ಇತರರಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ದೇವಸ್ಥಾನದ ಪ್ರಧಾನ ಅರ್ಚಕರಾದ ಗಿರೀಶ್ ಭಟ್, ಪ್ರಮೋದ್ ಭಟ್ ವಿವಿಧ ಪೂಜೆಗಳನ್ನು ನೆರವೇರಿಸಿದರು. ಆರ್ಯವೈಶ್ಯ ಮಂಡಳಿ ಉಪಾಧ್ಯಕ್ಷ ಎಸ್.ಎಂ.ಸತೀಶ್, ನಿರ್ದೇಶಕ ಎಂ.ಪಿ.ಸತ್ಯನಾರಾಯಣ, ರಿಜಿಡ್ ಗ್ರೂಪ್‌ನ ಸದಸ್ಯರಾದ ಪಿ.ಜಿ.ಶ್ರೀನಿವಾಸ್, ಎಸ್.ಎಂ.ನಾಗೇಂದ್ರ, ಪಿ.ಕೆ.ರಘು, ಎ.ವಿ.ಸಂತೋಷ, ಚಿತ್ರಾ ರಮೇಶ್, ಶಾಲಿನಿ ನಾಗೇಶ್, ವಾಸವಿ ಯುವಜನ ಸಂಘದ ಅಧ್ಯಕ್ಷ ಪ್ರವೀಣ್, ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷ್ಮೀ ಶ್ರೀನಿವಾಸ್ ಇತರರು ಇದ್ದರು.