ಧರ್ಮಗಳ ತುಷ್ಟೀಕರಣ ಒಳ್ಳೆಯದಲ್ಲ

Rambhapuri Jagadguru, Kuntoji, Guru Pattadhikara Mahotsav, Dharma Sandesh, Muddebihala,
ಮುದ್ದೇಬಿಹಾಳ ತಾಲೂಕು ಕುಂಟೋಜಿಯಲ್ಲಿ ನಡೆದ ಚನ್ನವೀರ ದೇವರ ಗುರು ಪಟ್ಟಾಧಿಕಾರ ಮಹೋತ್ಸವ, ಧರ್ಮ ಸಂದೇಶ ಸಮಾರಂಭದಲ್ಲಿ ರಂಭಾಪುರಿ ಜಗದ್ಗುರುಗಳು ಸಚಿವ ಶಿವಾನಂದ ಪಾಟೀಲರನ್ನು ಸನ್ಮಾನಿಸಿದರು. ಡಾ. ಚನ್ನವೀರ ಶಿವಾಚಾರ್ಯರು, ವಾಮದೇವ ಶಿವಾಚಾರ್ಯರು, ಡಾ. ನಾಗಭೂಷಣ ಶಿವಾಚಾರ್ಯರು, ರುದ್ರಮುನಿ ಶಿವಾಚಾರ್ಯರು, ವೀರಭದ್ರ ಶ್ರೀ ಇತರರಿದ್ದರು.
Published on

ಮುದ್ದೇಬಿಹಾಳ: ಸಹಿಷ್ಣುತೆ ಕಾಪಾಡಿಕೊಂಡು ಬರುವ ಮೂಲ ಆಶಯದೊಂದಿಗೆ ಎಲ್ಲ ಧರ್ಮಗಳು ಸಾಮಾಜಿಕ ಮೌಲ್ಯ ಎತ್ತಿ ಹಿಡಿದಿವೆ. ಸಾಮರಸ್ಯ ಭಾವ ತಂದುಕೊಡುತ್ತಿವೆ. ಹೀಗಿರುವಾಗ ಕೆಲವೇ ಧರ್ಮಗಳ ತುಷ್ಟೀಕರಣ ಒಳ್ಳೆಯದಲ್ಲ. ಸಮಾಜದಲ್ಲಿ ಆತಂಕ ಸೃಷ್ಟಿಯಾಗುತ್ತಿದ್ದು, ಧರ್ಮವೂ ಆತಂಕದಲ್ಲಿದೆ ಎಂದು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಭಗವತ್ಪಾದರು ಹೇಳಿದರು.

ತಾಲೂಕಿನ ಕುಂಟೋಜಿಯಲ್ಲಿ ಜರುಗಿದ ಗುರು ಪಟ್ಟಾಧಿಕಾರ ಮಹೋತ್ಸವ, ಧರ್ಮ ಸಂದೇಶ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವೀರಶೈವ ಧರ್ಮ ಅತ್ಯಂತ ಪ್ರಾಚೀನವಾದದ್ದು. ಧರ್ಮಪೀಠ, ಮಠಗಳು ಆಧ್ಯಾತ್ಮಲೋಕಕ್ಕೆ ಮಾತ್ರವಲ್ಲದೆ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೂ ಹೆಚ್ಚು ಮಹತ್ವ ಕೊಟ್ಟು ಸಾಧನೆ ಮಾಡಿವೆ. ಇಂದಿನ ಸಂಕೀರ್ಣಮಯ ಸಂದಿಗ್ಧ ಸಂದರ್ಭದಲ್ಲೂ ಉದಾರ, ಗಂಭೀರ ವಿಚಾರಗಳಿಂದ ಎಲ್ಲರನ್ನು ಸನ್ಮಾರ್ಗದ ಕಡೆ ತರುವ ಪ್ರಯತ್ನ ಮಾಡುತ್ತಿವೆ. ಪಂಚಪೀಠಗಳು ಗುರುಪೀಠಗಳಾಗಿ ಶಾಖಾ ಮಠಗಳನ್ನು ಹುಟ್ಟುಹಾಕಿ ಸಂಸ್ಕಾರ, ಸಂಸ್ಕೃತಿ ಕಲಿಸಲು ಆಧ್ಯಾತ್ಮದ ಕೇಂದ್ರಗಳಾಗಿ ಪ್ರಾಮಾಣಿಕ ಕೆಲಸ ನಿರ್ವಹಿಸುತ್ತಿವೆ ಎಂದರು.

ಪಟ್ಟಾಧಿಕಾರ ಮಹೋತ್ಸವ ಸಂಭ್ರಮ, ಸಡಗರದಿಂದ ಜರುಗಿ ಕನಸು ನನಸಾಗಿದೆ. ರಂಭಾಪುರಿ ಪೀಠದ ಶಾಖಾ ಮಠವಾಗಿರುವ ಕುಂಟೋಜಿ ಹಿರೇಮಠದ ಅಧಿಕಾರ ಸೂತ್ರ ವಹಿಸಿಕೊಂಡಿರುವ ಚನ್ನವೀರ ಶಿವಾಚಾರ್ಯರು ಈ ಭಾಗದ ಸರ್ವ ಜನ ಸಮುದಾಯಕ್ಕೆ ಆದರ್ಶ ಮಾರ್ಗದರ್ಶನ ಮಾಡಲಿ. ವೀರಶೈವ ಧರ್ಮ ಸಂಸ್ಕೃತಿ, ಗುರು ಪರಂಪರೆಯ ಆದರ್ಶ ಮೌಲ್ಯಗಳನ್ನು ಬೆಳೆಸುವ ವಿಶ್ವಾಸವಿದೆ. ಆದಷ್ಟು ಬೇಗ ತಾಲೂಕು ಕೇಂದ್ರ ಸ್ಥಾನವಾಗಿರುವ ಮುದ್ದೇಬಿಹಾಳದಲ್ಲಿ ರಂಭಾಪುರಿ ಪೀಠದ ದಸರಾ ದರ್ಬಾರ್ ಏರ್ಪಡಿಸಬೇಕು ಎಂದರು.

ಸಚಿವ ಶಿವಾನಂದ ಪಾಟೀಲ ಮಾತನಾಡಿ, ಪಟ್ಟಾಧಿಕಾರದ ನಂತರ ಚನ್ನವೀರ ಶಿವಾಚಾರ್ಯರ ಜವಾಬ್ದಾರಿ ಹೆಚ್ಚಾಗಿದೆ. ವೀರಶೈವ ಧರ್ಮ ಕರ್ನಾಟಕ ಮಾತ್ರವಲ್ಲದೆ ಜಗತ್ತಿಗೆ ಮಾರ್ಗದರ್ಶನ ಆಗುವಂಥದ್ದು. ಅನ್ಯ ಪರಂಪರೆಯ ಬಸವಣ್ಣ ವೀರಶೈವ ಪರಂಪರೆ ಒಪ್ಪಿಕೊಂಡು ವಿಶ್ವಮಾನ್ಯರಾದರು ಎಂದರು.

ಚನ್ನವೀರ ಶಿವಾಚಾರ್ಯರು ಮಾತನಾಡಿ, ಭಕ್ತರು ತೋರಿಸಿದ ಪ್ರೀತಿ, ತ್ಯಾಗ ಅವಿಸ್ಮರಣೀಯ. ಎಷ್ಟು ಜನ್ಮವೆತ್ತಿದರೂ ಋಣ ತೀರಿಸಲಾಗದು. ಮುಂದಿನ ಜನ್ಮವಿದ್ದರೆ ಕುಂಟೋಜಿಯಲ್ಲಿಯೇ ಜನಿಸುವೆ. ಮಠದ ಜೀರ್ಣೋದ್ಧಾರ ಸಮಾಜದ ಅಭ್ಯುದಯ. ಮಠ ಮಂದಿರಗಳು ಉದ್ಧಾರವಾದರೆ ಅಖಂಡ ಹಿಂದು ರಾಷ್ಟ್ರ ಉದ್ಧಾರವಾಗುತ್ತದೆ. ನಮ್ಮ ಮಠ ಸನಾತನ ಪರಂಪರೆ ಎತ್ತಿ ಹಿಡಿದಿದೆ ಎಂದರು.

ನಿಡಗುಂದಿ ರುದ್ರಮುನಿ ಶಿವಾಚಾರ್ಯರು, ಎಮ್ಮಿಗನೂರನ ವಾಮದೇವ ಮಹಾಂತ ಶಿವಾಚಾರ್ಯರು, ಮಳಲಿಯ ಡಾ. ನಾಗಭೂಷಣ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಉದ್ಯಮಿ ರಮೇಶ ಶಿರಾಡೋಣ ಮಾತನಾಡಿದರು. ಕಮತಗಿಯ ಹುಚ್ಚೇಶ್ವರ ಶ್ರೀ ಹಾಗೂ ವಿವಿಧ ಮಠಾಧೀಶರು, ಗಣ್ಯರು, ಮಹೋತ್ಸವ ಸಮಿತಿ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು. ದಾನಿಗಳನ್ನು, ಮಹೋತ್ಸವ ಯಶಸ್ಸಿಗೆ ಶ್ರಮಿಸಿದ ಕುಂಟೋಜಿಯ ಸ್ವಯಂ ಸೇವಕರನ್ನು, ಪ್ರಮುಖರನ್ನು ಸನ್ಮಾನಿಸಲಾಯಿತು. ಚನ್ನವೀರ ಶಿವಾಚಾರ್ಯರನ್ನು ಕೆಲ ಮಠಾಧೀಶರು, ಭಕ್ತರು ಚಿನ್ನ, ಬೆಳ್ಳಿ, ಧನ, ಫಲಪುಷ್ಪ ಸಮೇತ ಸನ್ಮಾನಿಸಿದರು.

ಪ್ರಭುಗೌಡ ದೇಸಾಯಿ ಸ್ವಾಗತಿಸಿದರು. ಕುಕನೂರಿನ ಚನ್ನಮಲ್ಲದೇವರು, ಸೂಗೂರಿನ ಚನ್ನರುದ್ರಮುನಿ ಶಿವಾಚಾರ್ಯರು, ಗಡಿಗೌಡಗಾಂವನ ಶಾಂತಲಿಂಗ ಶಿವಾಚಾರ್ಯರು ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net