ಧರ್ಮ ಸಮನ್ವಯ ಸಂತ ಹಾರಕೂಡ ಶ್ರೀ

5BK2
Published on

ಬಸವಕಲ್ಯಾಣ: ಧರ್ಮ, ಸಾಹಿತ್ಯ, ಸಂಸ್ಕೃತಿ ಸೇರಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ೮೨ ಸಾಧಕರಿಗೆ ಶ್ರೀ ಗುರು ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಮೂಲಕ ಒಂದೇ ವೇದಿಕೆಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಸಾಧಕರನ್ನು ಗೌರವಿಸಿ ಪ್ರೋತ್ಸಾಹಿಸುವ ಮೂಲಕ ಹಾರಕೂಡ ಶ್ರೀಮಠ ಹೊಸ ಪರಂಪರೆಗೆ ನಾಂದಿ ಹಾಡಿದೆ.

ತಾಲೂಕಿನ ಹಾರಕೂಡನ ಶ್ರೀ ಚೆನ್ನರೇಣುಕ ಬಸವ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಶ್ರೀ ಗುರು ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಎಲ್ಲ ಸಾಧಕರಿಗೆ ಪ್ರಶಸ್ತಿ ಫಲಕದೊಂದಿಗೆ ನೆನಪಿನ ಕಾಣಿಕೆ ನೀಡಿ ಸತ್ಕರಿಸಿದರು. ನಿಮ್ಮೆಲ್ಲರಿಂದ ಸಮಾಜಕ್ಕೆ ಇನ್ನಷ್ಟು ಸೇವೆ ಸಿಗುವಂತಾಗಲಿ ಎಂದು ಆಶೀರ್ವದಿಸಿದರು. ಜಿಲ್ಲೆ ಸೇರಿ ವಿವಿಧ ಜಿಲ್ಲೆಗಳಿಂದ ಮಹನೀಯರು ಕುಟುಂಬ ಸಮೇತರಾಗಿ ಆಗಮಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಮಾತನಾಡಿ, ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಗೆ ವಿಶಿಷ್ಟ ಕೊಡುಗೆ ನೀಡುವ ಜತೆಗೆ ಉತ್ತಮ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿರುವ ಹಾರಕೂಡ ಸಂಸ್ಥಾನದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಕಲ್ಯಾಣ ನಾಡಿನ ಅಪರೂಪದ ಧರ್ಮ ಸಮನ್ವಯ ಸಂತ ಎಂದು ಮಾಜಿ ಬಣ್ಣಿಸಿದರು.

ಹಾರಕೂಡ ಶ್ರೀ ಮಠ ಒಂದು ಜಾತಿಗೆ ಸೀಮಿತವಲ್ಲ. ಎಲ್ಲ ಸಮುದಾಯದವರಿಗೂ ಈ ಮಠದಲ್ಲಿ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ೮೨ ಮಹನೀಯರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಶ್ರೀ ಮಠದಲ್ಲಿ ದಾಸೋಹಕ್ಕೆ ಆದ್ಯತೆ ನೀಡಲಾಗುತ್ತದೆ. ಹೀಗಾಗಿ ಈ ಮಠ ಕಲ್ಯಾಣ ಕರ್ನಾಟಕ, ರಾಜ್ಯವಲ್ಲದೇ ತಿರುಪತಿ, ಶಿರಡಿ ಮಾದರಿಯಲ್ಲಿ ದೇಶದಲ್ಲಿಯೇ ಹೆಸರು ಮಾಡಲಿ ಎಂದು ಸದಾಶಯ ವ್ಯಕ್ತಪಡಿಸಿದರು.

ನಾನು ಶ್ರೀ ಮಠಕ್ಕೆ ಮಾಜಿ ಸಚಿವನಾಗಿ ಬಂದಿಲ್ಲ. ಶ್ರೀ ಮಠದ ಪರಮ ಭಕ್ತನಾಗಿ ದಂಪತಿ ಸಮೇತ ಆಗಮಿಸಿದ್ದೇವೆ. ಕಳೆದ ವಿಧಾನ ಸಭಾ ಕ್ಷೇತ್ರದ ಚುನಾವಣೆ ಸೋತ ಬಳಿಕ ಯಾವುದೇ ವೇದಿಕೆ ಹಂಚಿಕೊAಡಿಲ್ಲ. ಶ್ರೀಗಳು ದೂರವಾಣಿ ಕರೆ ಮಾಡಿ ಸಮಾರಂಭ ಉದ್ಘಾಟಿಸಲು ದಂಪತಿ ಸಮೇತ ಆಗಮಿಸಬೇಕು ಎಂದು ಹೇಳೀದ್ದರು. ಹೀಗಾಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದೇವೆ. ನಾನು ಚುನಾವಣೆಯಲ್ಲಿ ಮಾತ್ರ ಸೋತಿದ್ದೇನೆ. ಆದರೆ ಜನರ ಮಧ್ಯೆ ಉಳಿದು ಕೆಲಸ ಮಾಡುವೆ ಎಂದರು.

ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಸಾನಿಧ್ಯ ವಹಿಸಿದರು. ಮೇಘರಾಜ ನಾಗರಾಳೆ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಜಗನ್ನಾಥ ಪಾಟೀಲ್ ಮಂಠಾಳ, ಮಾಲಾ ಬಿ.ನಾರಾಯಣರಾವ, ಬಾಬು ಹೊನ್ನಾನಾಯಕ, ಸುಭಾಷ ಮುರುಡ ಬೆಳಮಗಿ, ರಾಜಕುಮಾರ ಬಿರಾದಾರ ಸಿರಗಾಪುರ, ಕಾಶಪ್ಪ ದೇಗಾಂವ, ಸಿದ್ರಾಮಪ್ಪ ಗುದಗೆ ಹಾರಕೂಡ, ವಿಜಯಕುಮಾರ ಸಂಗೋಳಗಿ, ಮಲ್ಲಿನಾಥ ಹಿರೇಮಠ ಇತರರಿದ್ದರು. ಅಂಬಾರಾಯ ಉಗಾಜಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಸ್ಯ ಕಲಾವಿದ ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net