

ಭಾಲ್ಕಿ: ದೇವರು, ಧರ್ಮ ಹಾಗೂ ಸಂಸ್ಕೃತಿಯೇ ಭಾರತದ ದಿವ್ಯ ಶಕ್ತಿಯಾಗಿವೆ. ದೇಶ ಇಂದಿಗೂ, ಎಂದಿಗೂ ಈ ಮೂರು ತಳಹದಿ ಮೇಲೆ ಗಟ್ಟಿಯಾಗಿ ನೆಲೆ ನಿಂತು ವಿಶ್ವಕ್ಕೆ ಮಾರ್ಗದರ್ಶನ ಮಾಡಲಿದೆ ಎಂದು ಹಲಬರ್ಗಾ ರಾಚೋಟೇಶ್ವರ ವಿರಕ್ತ ಮಠದ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯರು ಹೇಳಿದರು.
ಹಲಬರ್ಗಾ ರಾಚೋಟೇಶ್ವರ ಮಠದಲ್ಲಿ ಶುಕ್ರವಾರ ರಾತ್ರಿ ಶ್ರೀ ಸಿದ್ದರಾಮೇಶ್ವರ ನಮ್ಮೂರು 8ನೇ ಜಾತ್ರೋತ್ಸವದ ಉದ್ಘಾಟನೆ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಪ್ರತಿಯೊಬ್ಬರಿಗೂ ದೇವರಲ್ಲಿ ಭಕ್ತಿ, ನಂಬಿಕೆ, ನಿಷ್ಠೆ ಇರಬೇಕು. ಧರ್ಮ ಹಾಗೂ ಸಂಸ್ಕೃತಿ ಉಳಿಸಿ, ಬೆಳೆಸಬೇಕು. ಇದರಿಂದ ಸದೃಢ ಭಾರತ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಕರೊನಾ ಲಾಕ್ ಡೌನ್ ಸಂದರ್ಭದಲ್ಲಿ ಮಂದಿರದ ಬಾಗಿಲು ಮುಚ್ಚಲು ಆದೇಶಿಸಿ ವೈನ್ಶಾಪ್, ಬಾರ್ಗಳನ್ನು ತೆರೆಯಲು ಸರ್ಕಾರ ಅವಕಾಶ ಮಾಡಿಕೊಟ್ಟಿದ್ದ ನಿರ್ಣಯಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಶ್ರೀಗಳು, ಸರ್ಕಾರದಲ್ಲಿರುವವರು ವಾಸ್ತವ ಅರಿಯಬೇಕು. ದೇವರು ಭಾರತೀಯ ಶಕ್ತಿ ಮತ್ತು ಭಕ್ತಿ. ಮಂದಿರದ ಬಾಗಿಲು ಬಂದ್ ಮಾಡಿದರೆ ಏನೂ ಸಾಧಿಸಲಾಗದು. ಜನರ ಭಾವನೆಗೆ ಸರ್ಕಾರಗಳು ಸ್ಪಂದಿಸುವ ಕೆಲಸ ಮಾಡಬೇಕು. ದೇವರ ಬಾಗಿಲು ಮುಚ್ಚುವಿಕೆಗೆ ಇನ್ಮುಂದೆ ಸಮರ್ಥಿಸಲಾಗದು ಎಂದರು.
ಸಾನ್ನಿಧ್ಯ ವಹಿಸಿದ್ದ ಹುಲಸೂರು ಗುರುಬಸವೇಶ್ವರ ಸಂಸ್ಥಾನದ ಶ್ರೀ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ವಿಚಾರ ಭಾರತೀಯ ಸಂಸ್ಕೃತಿಯ ವಿಚಾರಗಳಾಗಿವೆ. ಶೋಷಿತ, ವಂಚಿತ, ಪೀಡಿತ, ತಳ ಸಮುದಾಯದ ಜನರಿಗೆ ಸಮಾಜದ ಎಲ್ಲರ ಸಮನಾಗಿ ಹಕ್ಕು ಕಲ್ಪಿಸಿದ ಮೊದಲಿಗ ಬಸವಣ್ಣನವರು. ಹೀಗಾಗಿ ಅವರು ಶ್ರೇಷ್ಠ ಎನಿಸಿದ್ದಾರೆ. ಬಸವ ತತ್ವ ಪ್ರಚಾರ, ಪ್ರಸಾರಕ್ಕಾಗಿ ಎರಡು ಸಲ ದೇಶಾದ್ಯಂತ ಪಾದಯಾತ್ರೆ ಮಾಡಲು ಬಸವಶಕ್ತಿಯೇ ಕಾರಣ ಎಂದರು.
ವಿಜಯವಾಣಿ ಜಿಲ್ಲಾ ಹಿರಿಯ ವರದಿಗಾರ ಸದಾನಂದ ಜೋಶಿ ಉದ್ಘಾಟಿಸಿ ಮಾತನಾಡಿ, ಜಾತ್ರೆಗಳು ಭಾವೈಕ್ಯ, ಸಾಮರಸ್ಯದ ಕೇಂದ್ರಗಳು. ಭಾರತದ ಪರಂಪರೆ ವಿಶ್ವದಲ್ಲೇ ಅತಿ ವಿಶಿಷ್ಟವಾಗಿದೆ. ಇಂದಿನ ಮಕ್ಕಳಿಗೆ ಇದರ ಪರಿಚಯ ಮಾಡಿಸುವ ಹೊಣೆ ಪಾಲಕರ ಮೇಲಿದೆ ಎಂದರು.
ಪ್ರಮುಖರಾದ ಶಿವಯ್ಯ ಸ್ವಾಮಿ, ಅನೀಲ ದಾಡಗೆ, ಗಣೇಶ ಪಾಟೀಲ್ ಶಿವಕುಮಾರ ಪಾಟೀಲ್ ತೇಗಂಪುರ, ಪ್ರದೀಪ ದೇಶಮುಖ, ರವಿ ದೇಶಮುಖ, ಗುಂಡೇರಾವ ಪಾಟೀಲ್ ಶಾಂತಕುಮಾರ ಖಂಡ್ರೆ, ಹಾವಗಿರಾವ ಇತರರಿದ್ದರು. ಧನರಾಜ ಪಾಟೀಲ್ ನಿರೂಪಣೆ ಮಾಡಿದರು. ಇದಕ್ಕೂ ಮುನ್ನ ರಾಚೋಟೇಶ್ವರ ಗದ್ದುಗೆಗೆ ಸಂಗೀತ ರುದ್ರಾಭಿಷೇಕ, ಮಠದ ಪರಿಸರದ ಬಾವಿಗೆ ಮುತ್ತೈದೆಯರಿಂದ ಪೂಜೆ ನಡೆಯಿತು. ಶ್ರೀ ಶರಣಕುಮಾರ ಶಾಸ್ತ್ರೀ ಪ್ರವಚನ ನೀಡಿದರು. ಜ. 11 ರವರೆಗೆ ಜಾತ್ರೋತ್ಸವ ನಿಮಿತ್ತ ನಿತ್ಯ ಸಂಜೆ ಪ್ರವಚನ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಲಿವೆ.
ಅನ್ನದಾನೀಶ್ವರ ಶ್ರೀ ಭೇಟಿ 11ಕ್ಕೆ
ಭಾಲ್ಕಿ: ನಮ್ಮೂರು ಜಾತ್ರೋತ್ಸವ ಸಮಾರೋಪ ಜ.11ರಂದು ನಡೆಯಲಿದ್ದು, ಅಂದು ಮುಂಡರಗಿ ಸಂಸ್ಥಾನದ ಶತಾಯುಷಿ ನಾಡೋಜ ಜಗದ್ಗುರು ಶ್ರೀ ಡಾ.ಅನ್ನದಾನೀಶ್ವರ ಶಿವಯೋಗಿ ಪಾಲ್ಗೊಂಡು ಭಕ್ತರಿಗೆ ಆಶೀರ್ವದಿಸಲಿದ್ದಾರೆ. ಶ್ರೀಗಳು ಧರ್ಮ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹಾವಗಿಲಿಂಗೇಶ್ವರ ಶ್ರೀ ಹೇಳಿದರು. ನಿತ್ಯ ಸಂಜೆಯಿಂದ ರಾತ್ರಿವರೆಗೆ ವಿವಿಧ ಕಾರ್ಯಕ್ರಮ ನಡೆಯಲಿವೆ. ರಾತ್ರಿ 8ಕ್ಕೆ ಶರಣಕುಮಾರ ಶಾಸ್ತ್ರೀ ಪ್ರವಚನ ನೀಡುವರು. ಎಲ್ಲ ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಿದರು.