ಧರ್ಮ ಸಂಕಟಕ್ಕಿಂತ ಇಳುವರಿ ಕುಸಿತದ ಭೀತಿ : ವಿವಾದ, ಗೊಂದಲಕ್ಕೆ ಕಿವಿಗೊಡದೆ ಸೌಹಾರ್ದತೆಯಿಂದ ವ್ಯಾಪಾರ ವಹಿವಾಟಿಗೆ ರೈತರು, ವ್ಯಾಪಾರಿಗಳ ಒಡಂಬಡಿಕೆ

1
Published on

ಪಾ.ಶ್ರೀ.ಅನಂತರಾಮ್​ ಕೋಲಾರ

ವಿಶ್ವಕ್ಕೆ ವಿವಿಧ ತಳಿಯ ಮಾವು ಪರಿಚಯಿಸಿರುವ ಶ್ರೀನಿವಾಸಪುರದಲ್ಲಿ ಮಾವು ಹಂಗಾಮ ಮೇ ತಿಂಗಳಲ್ಲಿ ಪ್ರಾರಂಭವಾಗಲಿದ್ದು, ರೈತರು ಮತ್ತು ವ್ಯಾಪಾರಿಗಳಿಗೆ ಧರ್ಮ ಸಂಕಟಕ್ಕಿಂತ ಉತ್ಪಾದನೆ ಕಡಿಮೆಯಾಗುವ ಭೀತಿ ಎದುರಾಗಿದೆ.

ಕರ್ನಾಟಕದಲ್ಲಿ ಮಾವು ಉತ್ಪಾದನೆ ಮಾಡುವ ಜಿಲ್ಲೆಗಳಲ್ಲಿ ಕೋಲಾರ ಜಿಲ್ಲೆ ಅಗ್ರಗಣ್ಯ ಸ್ಥಾನದಲ್ಲಿದೆ. ಒಟ್ಟು 48 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ವಿವಿಧ ತಳಿಗಳ ಮಾವು ಬೆಳೆಯಲಾಗುತ್ತಿದ್ದು, ಹವಾಮಾನ ವೈಪರೀತ್ಯದಿಂದ ಇಳುವರಿ ಕಡಿಮೆಯಾಗುವ ಸಾಧ್ಯತೆಯಿರುವುದರಿಂದ ಧರ್ಮ ಬದಿಗಿಟ್ಟು ಸರ್ಕಾರದಿಂದ ವಿಶೇಷ ಪರಿಹಾರ ಪಡೆಯಲು ಒಂದಾಗುತ್ತಿದ್ದಾರೆ.

ಮಾವು ಹಂಗಾಮ ಆರಂಭಕ್ಕೆ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಮಾವಿಗೂ ಧರ್ಮ ಸಂಕಟ ಎಂಬ ಪ್ರಚಾರ ಹರಡಿದ್ದರಿಂದ ರೈತರು ಮತ್ತು ವ್ಯಾಪಾರಿಗಳು ಕೊಂಚಮಟ್ಟಿಗೆ ತಬ್ಬಿಬ್ಬು ಆಗಿದ್ದರಾದರೂ ಶ್ರೀನಿವಾಸಪುರದ ರಾಜಕಾರಣಿಗಳು, ಮಾವು ಬೆಳೆಗಾರರ ಸಂದ ಮುಖಂಡರು ಪರಸ್ಪರ ಮಾತುಕತೆ ಮೂಲಕ ಮ್ಯಾಂಗೋ ಧರ್ಮದ ಮೂಲಕ ಕೋಮು ದಳ್ಳುರಿಗೆ ಯತ್ನಿಸಿರುವವವರ ಬಗ್ಗೆ ಎಚ್ಚರಿಕೆಯಿಂದ ಇರಲು ಹಾಗೂ ಸೌಹಾರ್ದತೆಯಿಂದ ವ್ಯಾಪಾರ ವಹಿವಾಟು ನಡೆಸಲು ತೀರ್ಮಾನಿಸಿದ್ದಾರಲ್ಲದೆ, ಅಪಪ್ರಚಾರ ನಡೆಸಿರುವವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ಸೈಬರ್​ ಪೊಲೀಸರಿಗೆ ದೂರು ನೀಡಿದ್ದಾರೆ.

ಉತ್ಪಾದನೆ ಕಡಿಮೆಯಾಗುವ ಆತಂಕ: ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಬಹುತೇಕ ಕಡೆ ಮಾವಿನ ಮರಗಳಲ್ಲಿ ಹವಾಮಾನ ವೈಪರೀತ್ಯದಿಂದ ತೇವಾಂಶ ಹೆಚ್ಚಾಗಿರುವುದರಿಂದ ಹೂವು ಅಧಿಕವಾಗಿ, ಕಾಯಿ ಕಟ್ಟದಿರುವುದರಿಂದ ಉತ್ಪಾದನೆ ಕಡಿಮೆಯಾಗುವ ಆತಂಕ ಎದುರಾಗಿದೆ.

ಜಿಲ್ಲೆಯಲ್ಲಿ ಮೊದಲು ಸುವರ್ಣರೇಖಾ ತಳಿ ಮೇ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ನಂತರ ತೋತಾಪುರಿ, ಮಲ್ಲಿಕಾ, ರಾಜಗಿರಿ, ಬಾದಾಮಿ, ರಸಪುರಿ ವಹಿವಾಟು ನಡೆಯಲಿದೆ. ಜೂನ್​ ಅಥವಾ ಜುಲೈನಲ್ಲಿ ವ್ಯಾಪಾರ ಅಂತ್ಯಗೊಳ್ಳಲಿದೆ. ಜಿಲ್ಲೆಯಲ್ಲಿ ಒಟ್ಟು 48 ಸಾವಿರ ಹೆಕ್ಡೇರ್​ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ, ಈ ಪೈಕಿ ಶ್ರೀನಿವಾಸಪುರ ತಾಲೂಕು ಒಂದರಲ್ಲೇ 22 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. 14 ಸಾವಿರ ಟನ್​ ತೋತಾಪುರಿ ಶ್ರೀನಿವಾಸಪುರದಲ್ಲಿ ಉತ್ಪಾದನೆಯಾಗಲಿದ್ದು ಕಾಯಿ ಕಟ್ಟದಿರುವುದರಿಂದ ರೈತರು ಹೆಚ್ಚಿನ ಲಾಭ ನಿರೀೆ ಮಾಡಲಾಗುತ್ತಿಲ್ಲ. ಜತೆಗೆ ರೈತರ ಹೊಲಗಳಿಗೆ ಹೋಗಿ ಮಾವು ಖರೀದಿ ಮಾಡಲು ವ್ಯಾಪಾರಿಗಳು ಮೀನ ಮೇಷ ಎಣಿಸುವಂತಾಗಿದೆ.

ಶ್ರೀನಿವಾಸಪುರ ಬಳಿಕ ಮುಳಬಾಗಿಲು ತಾಲೂಕಿನಲ್ಲೂ ಮಾವು ಅಧಿಕವಾಗಿ ಬೆಳೆಯಲಾಗುತ್ತಿದೆಯಾದರೂ ಶ್ರೀನಿವಾಸಪುರ ಮಾವು ಮಂಡಿಗೆ ಪೈಪೋಟಿ ನೀಡುವಷ್ಟು ಉತ್ಪಾದನೆ ಆಗುತ್ತಿಲ್ಲ. ಜತೆಗೆ ವ್ಯಾಪಾರಿಗಳು ನೆರೆಯ ಆಂಧ್ರ ಪ್ರದೇಶದಿಂದಲೂ ಮಾವು ತಂದು ಮಾರಾಟ ಮಾಡುವುದರಿಂದ ಸ್ಥಳಿಯ ರೈತರು ರಫ್ತಿಗೆ ಗಮನ ಹರಿಸುವಂತಾಗಿದೆ.

ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಮಾವನ್ನು ಬೆಂಗಳೂರು, ದೆಹಲಿ, ಮುಂಬೈ, ನಾಸಿಕ್​, ಪಂಜಾಬ್​, ಪಶ್ವಿಮ ಬಂಗಾಳ ಮಾತ್ರವಲ್ಲದೆ ವಿದೇಶಗಳಿಗೂ ರಫ್ತು ಮಾಡಲಾಗುತ್ತದೆ. ಶ್ರೀನಿವಾಸಪುರ ಎಪಿಎಂಸಿಯಲ್ಲಿ ಒಂದರಲ್ಲೇ 120ಕ್ಕೂ ಹೆಚ್ಚು ಮಂಡಿಗಳಿದ್ದು, ರೈತರು ಮತ್ತು ಮಾವು ವ್ಯಾಪಾರಿಗಳು ಮಾವು ಮಂಡಿಯನ್ನು ಈ ತಿಂಗಳ ಕಡೆಯಲ್ಲಿ ಸಜ್ಜುಗೊಳಿಸಿ ವಹಿವಾಟು ಆರಂಭಕ್ಕೆ ಮುಹೂರ್ತ ನಿಗದಿಗೆ ಕಾಯುತ್ತಿದ್ದಾರೆ.

ಮಾವಿಗೂ ಧರ್ಮ ಸಂಕಟ ಎಂಬ ಮಾಹಿತಿ ಸೋಷಿಯಲ್​ ಮಿಡಿಯಾದಲ್ಲಿ ಕಾಣಿಸಿಕೊಂಡಿದ್ದರಿಂದ ಮಾವು ಬೆಳೆಗಾರರು ಹಾಗೂ ಮಂಡಿ ಮಾಲೀಕರು ಎದೆಗುಂದಿದ್ದು ಸತ್ಯ. ಆದರೆ ಮಾವು ಬೆಳೆಗಾರರ ಸಂದ ಮುಖಂಡರು ಸಭೆ ನಡೆಸಿ ಅಪಪ್ರಚಾರಕ್ಕೆ ಕಿವಿಗೊಡದಂತೆ ಹಾಗೂ ಅಪಪ್ರಚಾರಕ್ಕೆ ಮಣೆ ಹಾಕದಂತೆ ತಿಳಿಸಿದ ಮೇಲೆ ಗೊಂದಕ್ಕೆ ತೆರೆ ಬಿದ್ದಿದೆ. ಮೇ ತಿಂಗಳಲ್ಲಿ ಮಾವು ಮಂಡಿಯ ಕೆಲಸ ಕಾರ್ಯ ಆರಂಭವಾಗಲಿದೆ, ಇಳುವರಿ ಕುಸಿತದಿಂದ ವ್ಯಾಪಾರ ವಹಿವಾಟಿನ ಮೇಲೆ ಕೊಂಚ ಪರಿಣಾಮ ಬೀರಬಹುದೇ ಹೊರತು ಧರ್ಮ ಸಂಕಟ ಉಂಟಾಗದು. ನೀಲಟೂರು ಚಿನ್ನಪ್ಪರೆಡ್ಡಿ, ಮುಖಂಡರು, ಮಾವು ಬೆಳೆಗಾರರ ಸಂ, ಶ್ರೀನಿವಾಸಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net