ಧರ್ಮ ರಕ್ಷಣೆಗೆ ಶ್ರಮಿಸಿದ ಶಂಕರಾಚಾರ್ಯರು

08rajesh1
Published on

ಚಾಮರಾಜನಗರ: ಶ್ರೀಶಂಕರಾಚಾರ್ಯರು ತಮ್ಮ ಜ್ಞಾನಾರ್ಜನೆಯ ಮೂಲಕ ಹಿಂದೂ ಧರ್ಮವನ್ನು ರಕ್ಷಣೆ ಮಾಡುವಲ್ಲಿ ಅಪಾರವಾಗಿ ಶ್ರಮಿಸಿದ್ದಾರೆ ಎಂದು ಎಂಎಸ್‌ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೇರಳದಲ್ಲಿ ಜನಿಸಿದ ಶಂಕರಾಚಾರ್ಯರು ಸುಮಾರು 32 ವರ್ಷಗಳ ಕಾಲ ದೇಶದಲ್ಲಿ ಸಂಚಾರ ಮಾಡುವ ಮೂಲಕ ಹಿಂದೂ ಧರ್ಮವನ್ನು ಪ್ರಚಾರ ಮಾಡಿದರು. ಅವರ ಅಪಾರವಾದ ಜ್ಞಾನದಿಂದ ಹಲವಾರು ಚಿಂತನೆಗಳನ್ನು ಜನಮಾನಸದಲ್ಲಿ ಬಿತ್ತಿದರು. ಅಂತಹ ದಾರ್ಶನಿಕರ ತತ್ವ-ಚಿಂತನೆಗಳು ನಮಗೆಲ್ಲರಿಗೂ ಆದರ್ಶವಾಗಬೇಕು ಎಂದು ಹೇಳಿದರು.

ದೇಶದಲ್ಲಿ ಹಿಂದೂ ಧರ್ಮದ ರಕ್ಷಣೆಯಲ್ಲಿ ಶ್ರೀಶಂಕರಾಚಾರ್ಯರ ಪಾತ್ರ ಅಪಾರವಾಗಿದೆ. ಅಂತಹ ಮಹನೀಯರ ಪ್ರತಿಮೆಯನ್ನು ನಿರ್ಮಾಣ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಭೇಟಿ ನೀಡುವ ಸಂದರ್ಭದಲ್ಲಿ ಅವರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ನಗರಸಭೆ ಅಧ್ಯಕ್ಷ ಸುರೇಶ್ ಮಾತನಾಡಿ, ಹಿಂದೂ ಧರ್ಮದ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶ್ರೀಶಂಕರಚಾರ್ಯರು, ಈ ಪ್ರಪಂಚಕ್ಕೆ ದಾರಿದೀಪವಾಗಿದ್ದಾರೆ. ಅವರು ಹಾಕಿಕೊಟ್ಟ ಆದರ್ಶಗಳನ್ನು ಮೈಗೂಡಿಸಿಕೊಂಡು ನಾವೆಲ್ಲರೂ ಸಾಗಬೇಕಿದೆ ಎಂದು ತಿಳಿಸಿದರು.

ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ( ಮುನ್ನಾ) ಮಾತನಾಡಿ, ನಮ್ಮ ದೇಶದ ಸನಾತನ ಹಿಂದೂ ಧರ್ಮದ ಸಾರವನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಶಂಕರಾಚಾರ್ಯರು ಪ್ರಧಾನರಾಗಿದ್ದಾರೆ. ಅಂತಹ ದಾರ್ಶನಿಕರಿಂದಲೇ ನಮ್ಮ ನೆಲದಲ್ಲಿ ಆಧ್ಯಾತ್ಮೀಕ ಮನೋಭಾವನೆ ಇಂದಿಗೂ ನೆಲೆಯಾಗಿದೆ. ಇಂತಹ ಮಹಾನ್ ಚೇತನಗಳ ಜಯಂತಿ ಆಚರಣೆ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶೃತಿ, ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ಜಿ.ಎಂ.ಹೆಗ್ಗಡೆ, ಚುಡಾ ಮಾಜಿ ಅಧ್ಯಕ್ಷ ಬಾಲಸುಬ್ರಹ್ಮಣ್ಯಂ, ನಗರಸಭೆ ಸದಸ್ಯರಾದ ಗಾಯಿತ್ರಿ ಚಂದ್ರಶೇಖರ್, ನಾಗಲಕ್ಷ್ಮೀ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡಯ್ಯ, ಪ್ರದೀಪ್ ದಿಕ್ಷೀತ್ ಹಾಗೂ ಇತರರು ಉಪಸ್ಥಿತರಿದ್ದರು.

ಮಾನವ ಕಲ್ಯಾಣಕ್ಕೆ ಮುಡಿಪು:

ಕೇರಳದಲ್ಲಿ ಜನಿಸಿದ ಶ್ರೀಶಂಕರಾಚಾರ್ಯರು ಜಗತ್ತಿಗೆ ಆಧ್ಯಾತ್ಮಿಕ ಸಂದೇಶವನ್ನು ನೀಡುತ್ತಿರುವ ಶೃಂಗೇರಿ ಮಠದಲ್ಲಿ ನೆಲೆಸಿ ಮಾನವ ಕಲ್ಯಾಣಕ್ಕಾಗಿ ಜೀವನವನ್ನು ಮುಡಿಪಾಗಿಟ್ಟರು ಎಂದು ಸಂಸ್ಕೃತಿ ಚಿಂತಕ ಸುರೇಶ್ ಎನ್.ಋಗ್ವೇದಿ ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿ, ಭಾರತೀಯ ಸನಾತನ ಧರ್ಮ ಹಾಗೂ ಅದ್ವೈತ ಸಿದ್ಧಾಂತದ ಉಳಿವಿಗಾಗಿ ಶಂಕರಾಚಾರ್ಯರು ಶ್ರಮವಹಿಸಿದ್ದಾರೆ. ಪ್ರಪಂಚಕ್ಕೆ ಶಿವನ ಅವತಾರವಾಗಿ ಜ್ಞಾನದ ಬೆಳಕನ್ನು ಶಂಕರಾಚಾರ್ಯರು ನೀಡಿದ್ದಾರೆ. ಬಹುಮುಖ್ಯವಾಗಿ ಮಾತೃ ಭಕ್ತಿಯನ್ನು ಶಂಕರಾಚಾರ್ಯರಿಂದ ಕಲಿಯಬೇಕಾಗಿದೆ. ಅವರು ತಮ್ಮ ದಿವ್ಯ ಪ್ರಭೆಯಿಂದ ಪೂರ್ಣಾ ನದಿಯನ್ನೇ ಮನೆಯ ಮುಂಭಾಗ ಹರಿಸಿದರು. ಸ್ವಯಂ ಸನ್ಯಾಸ ದೀಕ್ಷೆಯನ್ನು ಪಡೆದ ಶಂಕರಾಚಾರ್ಯರು, ಬಡತನವನ್ನು ನಿರ್ಮೂಲನೆ ಮಾಡುವ ಆಕಾಂಕ್ಷೆಯನ್ನು ಹೊಂದಿದ್ದರು. ಇಡೀ ದೇಶವನ್ನು ಪರ್ಯಟನೆ ಮಾಡಿದ ಶಂಕರರು ಭಗವದ್ಗೀತೆಗೆ ಬರೆದ ಭಾವಾರ್ಥಗಳು ಇಂದಿಗೂ ಆಧಾರವಾಗಿದೆ. ಕಾಶ್ಮೀರದ ಪಂಡಿತರು ಜ್ಞಾನದ ಪ್ರತಿಕವಾಗಿರುವುದಕ್ಕೆ ಶಂಕರಾಚಾರ್ಯರೇ ಕಾರಣರಾಗಿದ್ದಾರೆ ಎಂದು ತಿಳಿಸಿದರು.

ಬೆಳ್ಳಿ ರಥದಲ್ಲಿ ಮೆರವಣಿಗೆ:

ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಬೆಳ್ಳಿರಥದಲ್ಲಿ ಶ್ರೀಶಂಕರಾಚಾರ್ಯರ ಭಾವಚಿತ್ರ ಮೆರವಣಿಗೆಗೆ ಎಂಎಸ್‌ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ಬಳಿಕ ಅಲ್ಲಿಂದ ಹೊರಟು ಶ್ರೀಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಸಾಗಿದ ಮೆರವಣಿಗೆ ವೇದಿಕೆ ಕಾರ್ಯಕ್ರಮ ನಡೆದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಅಂತ್ಯವಾಯಿತು. ಮಂಗಳ ವಾದ್ಯದೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳು, ಸಮುದಾಯದ ಮಹಿಳೆಯರು, ಜನಪ್ರತಿನಿಧಿಗಳು ಹಾಗೂ ಯುವಕರು ಭಾಗವಹಿಸಿದ್ದರು.

ದೇಶದ ನಾಲ್ಕೂ ದಿಕ್ಕಿನಲ್ಲೂ ಮಠಗಳನ್ನು ಸ್ಥಾಪನೆ ಮಾಡುವ ಮೂಲಕ ಶಂಕರಾಚಾರ್ಯರು ವೇದಾಂತ ಸಾರವನ್ನು ಸಾರಿದರು. ವೇದ, ಉಪನಿಷತ್ತುಗಳನ್ನು ಬಾಲ್ಯದಲ್ಲೇ ತಿಳಿದುಕೊಂಡು ಹಲವಾರು ಕೃತಿಗಳನ್ನು ರಚನೆ ಮಾಡಿದರು. ಈ ಮೂಲಕ ಜಗತ್ತಿಗೆ ಹಿಂದೂಧರ್ಮ ಮತ್ತು ಅದ್ವೈತ ಸಿದ್ಧಾಂತದ ಮಹತ್ವವನ್ನು ಸಾರಿದರು.

-ಮಮತಾ ಬಾಲಸುಬ್ರಹ್ಮಣ್ಯಂ, ಉಪಾಧ್ಯಕ್ಷೆ, ನಗರಸಭೆ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net