

ಗೋಣಿಕೊಪ್ಪ: ಜಿಲ್ಲೆಯಲ್ಲಿ ಬೇರೂರಲು ಹೊರಟಿರುವ ಭಯೋತ್ಪಾದನೆಯನ್ನು ನಿಶ್ಯಕ್ತಗೊಳಿಸಲು ಧರ್ಮ ರಕ್ಷಣೆಗೆ ಮುಂದಾಗಬೇಕು ಎಂಬ ಘೋಷಣೆ ವಿಶ್ವ ಹಿಂದೂ ಪರಿಷತ್ ವತಿಯಿಂದ ಬುಧವಾರ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ವ್ಯಕ್ತವಾಯಿತು.
ಕೊಡಗು ಜಿಲ್ಲೆಯಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿದೆ ಎಂಬ ಗುಪ್ತಚರ ಮಾಹಿತಿ ಹಿನ್ನೆಲೆ, ಹಿಂದು ಸಂಘಟನೆಗಳ ಕಾರ್ಯಕರ್ತರು ಇಲ್ಲಿನ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿ ದೇಶ ರಕ್ಷಣೆಗೆ ಮುಂದಾಗಲು ಕರೆ ನೀಡಿದರು. ಪೊಲೀಸ್ ಇಲಾಖೆ ಮತ್ತಷ್ಟು ಜಾಗೃತಗೊಂಡು ಧರ್ಮ ರಕ್ಷಣೆಗೆ ಸರ್ಕಾರದ ಹಣವನ್ನು ವಿನಿಯೋಗಿಸುವ ಕಾರ್ಯ ನಡೆಸಬೇಕು ಎಂಬ ಒತ್ತಾಯ ಕೇಳಿ ಬಂತು.
ವ್ಯಾಪಾರ, ಕಾರ್ಮಿಕರ ಸೋಗಿನ ಮೂಲಕ ಜಿಲ್ಲೆಯ ಅಶಾಂತಿಗೆ ಕಾರಣರಾದವರ ವಿರುದ್ಧ ಹೋರಾಟಕ್ಕೆ ಹಿಂದುಗಳು ಒಂದಾಗಬೇಕಿದೆ. ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯಲು ಪಣ ತೊಡುವ ಬೆಂಬಲ ವ್ಯಕ್ತವಾಯಿತು.
ವೃತ್ತನಿರೀಕ್ಷಕ ರಾಮರೆಡ್ಡಿ ಮೂಲಕ ಉಗ್ರಗಾಮಿ ಚಟುವಟಿಕೆ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂಬ ಮನವಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಯಿತು.
ಆರ್‌ಎಸ್‌ಎಸ್ ಸಂಘಚಾಲಕ್ ಚೆಕ್ಕೇರ ಮನು ಕಾವೇರಪ್ಪ ಮಾತನಾಡಿ, ಸಂಕ್ರಾಂತಿಯಂದು ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುವಷ್ಟು ಅನಿವಾರ್ಯತೆ ಹಿಂದುಗಳಿಗೆ ಬಂದಿರುವುದು ನೋವಿನ ಸಂಗತಿ ಎಂದರು.
ಗೋಣಿಕೊಪ್ಪ, ದೇವರಪುರ, ಅರ‌್ವತೋಕ್ಲು ಗ್ರಾಮಗಳಲ್ಲಿ ಭಯೋತ್ಪಾದನೆ ತರಬೇತಿ ಪಡೆಯುತ್ತಿರುವ ಮಾಹಿತಿ ಇದೆ. ಇದರಿಂದ ಪ್ರತಿ ಗ್ರಾಮಗಳಲ್ಲಿಯೂ ಭಯೋತ್ಪಾದನೆ ನೆಲೆಯೂರುತ್ತಿದೆ ಎಂದು ನಾವು ಅರಿತುಕೊಂಡು ಚಲನವಲನ ಅರಿತು ಭದ್ರತೆಗೆ ಸಹಕರಿಸಬೇಕಿದೆ. ಪೊಲೀಸ್ ಇಲಾಖೆ ಮತ್ತಷ್ಟು ಜಾಗೃತರಾಗಬೇಕಿದೆ. ಸರ್ಕಾರದ ಭತ್ಯೆಯನ್ನು ಕುಟುಂಬ ನಿರ್ವಹಣೆ ಬಳಕೆ ಮಾಡದೆ, ದೇಶದ ಧರ್ಮ ರಕ್ಷಣೆಗೂ ಮುಡಿಪಾಗಿಸಲು ವಿನಿಯೋಗಿಸಬೇಕು ಎಂದು ಹೇಳಿದರು.
ಪೌರತ್ವ ಕಾಯ್ದೆಗೆ ಗೋಣಿಕೊಪ್ಪ ಭಾಗದ ಒಂದಷ್ಟು ಮುಸ್ಲಿಮರು ವಿರೋಧಿಸಿರುವುದು ದೇಶದ ವಿರುದ್ಧದ ಚಟುವಟಿಕೆಯಾಗಿದೆ. ಶಾಂತಿಯ ಮೂಲಕ ವಿಶ್ವಕ್ಕೆ ಗುರುವಾಗಲು ಹೊರಟಿರುವ ಭಾರತದ ರಕ್ಷಣೆಗೆ ಹಿಂದುಗಳು ಯುದ್ಧಕ್ಕೂ ಮುಂದಾಗುವಷ್ಟು ಮನೋಭಾವ ರೂಪಿಸಿಕೊಳ್ಳಬೇಕು ಎಂದರು.
ಜಿಪಂ ಸದಸ್ಯ ಸಿ.ಕೆ. ಬೋಪಣ್ಣ, ಇಗ್ಗುತ್ತಪ್ಪ ಕೊಡವ ಸಂಘ ಉಪಾಧ್ಯಕ್ಷ ಕೊಣಿಯಂಡ ಬೋಜಮ್ಮ, ಭಜರಂಗದಳ ಜಿಲ್ಲಾ ಸಹ ಸಂಚಾಲಕ ಪ್ರವೀಣ್, ಬಿಜೆಪಿ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್, ಮಾಜಿ ಅಧ್ಯಕ್ಷ ಅರುಣ್ ಭೀಮಯ್ಯ, ಸ್ಥಳೀಯ ವಿಎಚ್‌ಪಿ ಅಧ್ಯಕ್ಷ ಕಾದೀರ ಪೊನ್ನಪ್ಪ, ಪ್ರಮುಖರಾದ ಶರತ್‌ಕಾಂತ್, ಕಿಲನ್ ಗಣಪತಿ, ಅಜಿತ್ ಕರುಂಬಯ್ಯ, ಸುವಿನ್ ಗಣಪತಿ ಮಾತನಾಡಿದರು.
ವಿಎಚ್‌ಪಿ ಸಂಘಟನಾ ಸಂಚಾಲಕ ಸುಬ್ರಮಣಿ, ಶ್ರೀರಾಮಸೇನೆ ಕಾರ್ಯಕರ್ತ ಎಂ.ಎನ್. ಗಣೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡು ಸೂಕ್ತ ಬಂದೋಬಸ್ತ್‌ಗೆ ಒತ್ತಾಯಿಸಿದರು.