

ಚನ್ನರಾಯಪಟ್ಟಣ: ಜಾತಿ, ಧರ್ಮ ಹಾಗೂ ದೇವರ ಹೆಸರಿನಲ್ಲಿ ಜನರನ್ನು ಒಡೆದು ಆಳುವ ನೀತಿಯು ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ನಡೆಯುತ್ತಿರುವ ದೊಡ್ಡ ದುರಂತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜನರಲ್ಲಿ ಮೂಢನಂಬಿಕೆ ತುಂಬಿ, ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಶೋಷಿಸುವ ಕೆಲಸ ನಡೆಯುತ್ತಿದೆ. ದೇಶದಲ್ಲಿ ಸಂವಿಧಾನವನ್ನು ರಕ್ಷಣೆ ಮಾಡುವ ಕೆಲಸವಾದಾಗ ಮಾತ್ರ ಅದು ನಮ್ಮಗಳಿಗೆ ರಕ್ಷಣೆ ಒದಗಿಸಲು ಸಾಧ್ಯ ಎಂದರು.
ವಿದ್ಯಾರ್ಥಿಗಳು ಸಂವಿಧಾನವನ್ನು ಅಧ್ಯಯನ ಮಾಡಬೇಕು. ಅದರಿಂದ ನಮಗೆ ಸಿಗಬೇಕಾದ ಹಕ್ಕುಗಳ ಕುರಿತಾಗಿ ತಿಳಿಯಬಹುದು. ಸಂವಿಧಾನದ ಆಶಯದಿಂದಾಗಿ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಸಿಗಬೇಕಾಗಿದೆ. ಮೇಲ್ವರ್ಗದ ಸಮಾಜ ಇಂದಿಗೂ ಅಸಮಾನತೆ ವ್ಯಕ್ತಪಡಿಸುತ್ತಿದೆ. ನಾವುಲ್ಲರೂ 20ನೇ ಶತಮಾನದಲ್ಲಿಯೂ ಸಮಾನತೆ ಸಾಧಿಸುವ ಸಲುವಾಗಿ ಹೋರಾಟ ನಡೆಸಬೇಕಾಗಿರುವುದು ಬುದ್ಧ, ಬಸವ ಹಾಗೂ ಅಂಬೇಡ್ಕರ್ ಹುಟ್ಟಿದ ನಾಡಿನ ದುರಂತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಎಂ.ರಾಮಚಂದ್ರ ಮಾತನಾಡಿ, ಮನುಷ್ಯತ್ವ ಹಾಗೂ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಒಳ್ಳೆಯ ಸಮಾಜ ಕಟ್ಟಲು ವಿದ್ಯಾರ್ಥಿಗಳು ಮುಂದಾಗಬೇಕು. ಪಠ್ಯ ಪುಸ್ತಕವನ್ನು ತಿರುಚಿ ರಾಜ್ಯದಲ್ಲಿ ಕುಚೇಷ್ಠೆಗೆ ಕಾರಣವಾಗಿರುವ ಜಾತಿ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಯನ್ನು ದೂರವಿರಿಸಬೇಕು ಎಂದು ತಿಳಿಸಿದರು.
ಬಿಎಸ್‌ಪಿ ಜಿಲ್ಲಾಧ್ಯಕ್ಷ ಗಂಗಾಧರ್ ಬಹುಜನ್ ಮಾತನಾಡಿ, ವಿದ್ಯೆ ವ್ಯಾಪಾರೀಕರಣವಾಗಿ ಮಾರಾಟದ ವಸ್ತುವಾಗಿದೆ. ಜಾತಿ ಹಾಗೂ ಧರ್ಮಗಳ ವಿಷಬೀಜ ಬಿತ್ತುವ ಸಂದಿಗ್ಧತೆಯಲ್ಲಿಯೂ ಉತ್ತಮ ಕಲಿಕೆಯೊಂದಿಗೆ ಸಾಧನೆಗೈದಿರುವ ನೀವುಗಳು ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದಿರುವ 56 ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ರಚಿತ ಸಂವಿಧಾನ ಪುಸ್ತಕವನ್ನು ನೀಡಿ ಅಭಿನಂದಿಸಲಾಯಿತು. ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ವಾಲ್ಮೀಕಿ ಸಂಘದ ಜಿಲ್ಲಾಧ್ಯಕ್ಷ ಮಹಂತಪ್ಪ, ಡಿ.ಕಾಳೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮ, ಪುರಸಭೆ ಸದಸ್ಯೆ ಸುಜಾತಾ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಜೆ.ಬಾಬು, ಮಾನವ ಬಂಧುತ್ವ ವೇದಿಕೆ ತಾಲೂಕು ಅಧ್ಯಕ್ಷ ಕೆ.ವಿ.ಸತೀಶ್, ಬಿಎಸ್‌ಪಿ ತಾಲೂಕು ಅಧ್ಯಕ್ಷ ಸಿ.ಜೆ.ಸೋಮಶೇಖರ್ ಇದ್ದರು.