ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು

SRP_24-01jpj
Published on

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ತಾಲೂಕಿನ ಸುತ್ತಮುತ್ತ ಮಂಗಳವಾರ ರಾತ್ರಿ ಭಾರಿ ಬಿರುಗಾಳಿ ಸಹಿತ ಮಳೆಗೆ ಮರಗಳು ಬುಡ ಸಮೇತ ಧರೆಗುರುಳಿದ್ದು, ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ.


ತಾಲೂಕಿನ ಮಹದೇವಪುರ ಬೋರೆ ಗ್ರಾಮದಿಂದ 1.5 ಕಿ.ಮೀ. ದೂರದ ತರಿಪುರ ಗ್ರಾಮದವರೆಗೂ ಹೆದ್ದಾರಿ ಅಕ್ಕಪಕ್ಕದ ರೈತರ ಜಮೀನಿನಲ್ಲಿದ್ದ ಸಾಲು ಮರಗಳು ಬುಡ ಸಹಿತ ರಸ್ತೆಗೆ ಉರುಳಿವೆ. ಇದರೊಂದಿಗೆ 19ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ. ಘಟನೆಯಿಂದ ಮೈಸೂರು-ಮಹದೇವಪುರ ರಸ್ತೆ ಸಂಪರ್ಕ ತಡರಾತ್ರಿಯಿಂದಲೇ ಸ್ಥಗಿತಗೊಂಡಿದ್ದು, ವಿದ್ಯುತ್ ಅವಘಡ ಸಂಭವಿಸದಂತೆ ಎಚ್ಚರವಹಿಸಿ ಅರಕೆರೆ ಉಪ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.


ಸ್ಥಳಕ್ಕೆ ಬುಧವಾರ ಅರಣ್ಯ ಇಲಾಖೆ ಆರ್‌ಎಫ್‌ಒ ಅನಿತಾ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಮರಗಳ ತೆರವು ಕಾರ್ಯಾಚರಣೆ ನಡೆಸಿದರು. ಇದರೊಂದಿಗೆ ಸೆಸ್ಕ್ ಅಧಿಕಾರಿ, ಸಿಬ್ಬಂದಿ ಸಹ ಸ್ಥಳ ಪರಿಶೀಲಿಸಿ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದು, ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸಿ ಐದಾರು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡಲು ಶ್ರಮಿಸುತ್ತಿದ್ದಾರೆ.


ತಾಲೂಕಿನ ಚಿಕ್ಕಅಂಕನಹಳ್ಳಿ ಗ್ರಾಮದ ನಕ್ಷತ್ರ ಮಹಿಳಾ ಸಹಕಾರ ಸೇವಾ ಟ್ರಸ್ಟ್‌ನ ಗಂಧದ ಕಡ್ಡಿ ಕಾರ್ಖಾನೆ ಛಾವಣಿ ಹಾರಿ ಹೋಗಿ ಸಾಕಷ್ಟು ಪರಿಕರ ಹಾಗೂ ತಯಾರಿಯಾಗಿದ್ದ ಗಂಧದಕಡ್ಡಿ ಪ್ಯಾಕೆಟ್‌ಗಳು ಹಾನಿಗೀಡಾಗಿವೆ. ತಾಲೂಕಿನ ಕೂಡಲಕುಪ್ಪೆ ಹಾಗೂ ಮಹದೇವಪುರ ಗ್ರಾಮಗಳಲ್ಲಿ ತಲಾ 2 ಮನೆಗಳು ಹಾನಿಯಾಗಿವೆ ಎಂದು ತಾಲೂಕು ಆಡಳಿತ ವಿಜಯವಾಣಿಗೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net