ಧರೆಗುರುಳಿದ ಮನೆ, ವಿದ್ಯುತ್ ಕಂಬ

11 NRD-2
Published on

ನರಗುಂದ: ತಾಲೂಕಿನಲ್ಲಿ ಶನಿವಾರ ರಾತ್ರಿಯಿಡೀ ಸುರಿದ ನಿರಂತರ ಮಳೆಗೆ ಹಲವು ಮನೆಗಳು ಬಿದ್ದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ನಿರಂತರ ಮಳೆಯಿಂದಾಗಿ ಪಟ್ಟಣದ ದಂಡಾಪೂರ ಹಗೇದಕಟ್ಟಿ ಬಡಾವಣೆಯಲ್ಲಿ ಮನೆ ಗೋಡೆ ಮತ್ತು ಮೇಲ್ಛಾವಣಿ ರಾತ್ರಿ 11 ಗಂಟೆ ಸುಮಾರಿಗೆ ಕುಸಿದು ಬಿದ್ದಿದೆ. ಈ ಮನೆಯಲ್ಲಿ ಬಾಡಿಗೆಯಿದ್ದ ಬೀಬಿಜಾನ ಮತ್ತು ಇಮಾಮಹುಸೇನಿ ಜಾಲಗಾರ ಎಂಬುವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ವಿದ್ಯುತ್ ತಂತಿ ಹರಿದು ನಡು ರಸ್ತೆಯಲ್ಲಿಯೇ ಬಿದ್ದಿತ್ತು. ವಿದ್ಯುತ್ ತಂತಿ ಹರಿದು ಬಿದ್ದಿರುವುದನ್ನು ಗಮನಿಸಿದ ಮನೆ ಮಾಲೀಕ ಬಸವರಾಜ ಹೆಸ್ಕಾಂ ಸಿಬ್ಬಂದಿಗೆ ಮಾಹಿತಿ ನೀಡಿ ಅವಘಡ ತಪ್ಪಿಸಿದ್ದಾರೆ.

ಇದೇ ಬಡಾವಣೆಯ ಮಲ್ಲಪ್ಪ ಭೋವಿ, ಹಸನಸಾಬ ಕೆರೂರ, ಲೋಧಿ ಗಲ್ಲಿ ಬಡಾವಣೆಯ ಪಂಚಪ್ಪ ಬೆಳವಟಗಿ ಎಂಬುವರ ಮನೆಯ ಗೋಡೆಗಳು ಬಿದ್ದಿವೆ. ಅಧ್ಯಾಪಕ ನಗರದಲ್ಲಿನ ಚರಂಡಿವೊಂದು ಮಳೆ ನೀರಿನ ಸೆಳೆತಕ್ಕೆ 50 ಮೀಟರ್ ದೂರ ಕೊಚ್ಚಿಕೊಂಡು ಹೋಗಿದೆ. ನವೋದಯ ಶಾಲೆಯ ಚರಂಡಿ ಪಕ್ಕದಲ್ಲಿನ ಎರಡು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ವಿಪರೀತ ಮಳೆಗೆ ಪಟ್ಟಣದ ಬಹುತೇಕ ಜನರ ಬದುಕು ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲರು ಮಾತ್ರ ಇದಕ್ಕೂ ತಮಗೂ ಯಾವುದೇ ಸಂಬಂಧವೇ ಇಲ್ಲವೆಂಬಂತೆ ಮನೆ ಬಿಟ್ಟು ಹೊರಗಡೆ ಬರುತ್ತಿಲ್ಲ. ಕರೊನಾ ಭಯಕ್ಕೆ ಕಳೆದೆರಡು ತಿಂಗಳಿನಿಂದ ಯಾವುದೇ ಪ್ರದೇಶಗಳಿಗೆ ಭೇಟಿ ಕೊಟ್ಟಿಲ್ಲ. ಹೀಗಾಗಿ ನಮ್ಮ ಕಷ್ಟ ಕೇಳುವವರು ಯಾರೂ ಇಲ್ಲದಂತಾಗಿದೆ. ಮನೆ ಬಿದ್ದವರಿಗೆ ತಾಲೂಕಾಡಳಿತದಿಂದ ಪರಿಹಾರ ನೀಡುತ್ತಿಲ್ಲ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net