ಧರೆಗುರುಳಿದ ಕಂಬ, ಕಗ್ಗತ್ತಲಲ್ಲಿ ೮ ಗ್ರಾಪಂ

27klb Chincholi 01
ಚಿಂಚೋಳಿ ತಾಲೂಕಿನ ಸುಲೇಪೇಟ ಬಳಿ ಬಿರುಗಾಳಿಸಹಿತ ಧಾರಾಕಾರ ಮಳೆಗೆ ಮರ, ವಿದ್ಯುತ್ ಕಂಬ ಉರುಳಿ ಸಂಚಾರ ಸ್ಥಗಿತಗೊಂಡಿರುವುದು.
Published on

ಚಿಂಚೋಳ: ಪಟ್ಟಣ ಸೇರಿ ಮತಕ್ಷೇತ್ರದಾದ್ಯಂತ ಭಾನುವಾರ ಸುರಿದ ಬಿರುಗಾಳಿಸಹಿತ ಭಾರಿ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಬಹುತೇಕ ಕಡೆ ವಿದ್ಯುತ್ ಕಂಬ ಹಾಗೂ ಮರಗಳು ಧರೆಗುಳಿದ್ದರಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಕೆಲ ಹಳ್ಳಿಗಳಲ್ಲಿ ಬೇಸಿಗೆಯಲ್ಲೂ ಹಳ್ಳಗಳು ಮೈದುಂಬಿ ಹರಿಯುತ್ತಿವೆ.

ಸುಲೇಪೇಟ ಬಳಿಯ ಕಲಬುರಗಿ-ಚಿಂಚೋಳಿ ರಾಜ್ಯ ಹೆದ್ದಾರಿಯಲ್ಲಿ ಬಿರುಗಾಳಿಗೆ ಮರ ಮತ್ತು ವಿದ್ಯುತ್ ಕಂಬಗಳು ಬಿದ್ದಿದ್ದು, ಸಂಚಾರ ಮೂರು ಗಂಟೆಗೂ ಅಧಿಕ ಸ್ಥಗಿತಗೊಂಡಿತ್ತು. ಪ್ರಯಾಣಿಕರು ತೀವ್ರ ಪರದಾಟ ನಡೆಸುವಂತಾಯಿತು.

ರಟಕಲ್ ವಿಭಾಗದಲ್ಲಿ ೨೦ಕ್ಕೂ ಅಧಿಕ ವಿದ್ಯುತ್ ಕಂಬಗಳು ಬಿದ್ದಿದ್ದರಿಂದ ಸುತ್ತಲಿನ ಎಂಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಸ್ಥರು ಕಗ್ಗತ್ತಲಲ್ಲಿ ರಾತ್ರಿ ಕಳೆಯುವಂತಾಗಿದೆ. ದಸ್ತಾಪುರ ಬಳಿಯ ಹಳ್ಳ ಮೈದುಂಬಿ ಹರಿಯುತ್ತಿದೆ. ಸುಲೇಪೇಟ ಬಳಿಯ ಹಳ್ಳವೊಂದು ಮೈದುಂಬಿ ಹರಿಯುತ್ತಿದ್ದು, ಲಕ್ಕಮ್ಮ ದೇವಿ ದೇವಸ್ಥಾನ ಭಾಗಶಃ ಮುಳುಗಿದೆ.

ಸುಲೇಪೇಟ ಭಾಗದಲ್ಲಿ ೮ಕ್ಕೂ ಅಧಿಕ ವಿದ್ಯುತ್ ಕಂಬ ನೆಲಕ್ಕುರುಳಿದ್ದು, ತೆರವು ಕಾರ್ಯಾಚರಣೆ ಮುಂದುವರಿದಿದೆ. ವೆಂಕಟಾಪುರ- ೨, ಐಪಿ ಹೊಸಳ್ಳಿಯಲ್ಲಿ ಮೂರು ಕಂಬ ಬಿದ್ದಿವೆ. ಚಿಮ್ಮನಚೋಡ, ನಿಡಗುಂದಾ, ಚಿಂಚೋಳಿ ವಲಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ರಟಕಲ್ ಭಾಗದಲ್ಲಿ ಹೆಚ್ಚು ಹಾನಿಯಾಗಿದ್ದು, ಸದ್ಯ ವಿದ್ಯುತ್ ನೀಡಲು ಸಾಧ್ಯವಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಜೆಸ್ಕಾಂ ಸಹಾಯಕ ಅಭಿಯಂತರ ಕಾಮಣ್ಣ ಮನವಿ ಮಾಡಿದ್ದಾರೆ.

ನಾಗಾವಿ ನಾಡಿನಲ್ಲೂ ಅವಾಂತರ: ಚಿತ್ತಾಪುರದ ತಾಲೂಕಿನಲ್ಲಿ ಬಿರುಗಾಳಿ ಹಾಗೂ ಮಳೆಯ ಆರ್ಭಟ ಜೋರಾಗಿದೆ. ಸಂಜೆ ಆರಂಭವಾದ ಬಿರುಗಾಳಿ ಸಮೇತ ಮಳೆಯಿಂದ ವಿವಿಧೆಡೆ ವಿದ್ಯುತ್ ಕಂಬ ಮತ್ತು ಮರಗಳು ಧರೆಗುರುಳಿವೆ. ಅಲ್ಲೂರ್ (ಬಿ), ಅಲ್ಲೂರ್ (ಕೆ) ಗ್ರಾಮದಲ್ಲಿ ೯ ವಿದ್ಯುತ್ ಕಂಬ ಬಿದ್ದಿದ್ದು, ವಿದ್ಯುತ್ ಸ್ಥಗಿತಗೊಳಿಸಲಾಗಿದೆ. ಮೊಗಲಾ, ದಿಗ್ಗಾಂವ್ ಹಳ್ಳಿಯಲ್ಲಿ ಮರಗಳು ಧರೆಗುಳಿವೆ.

ಶೆಡ್ ಬಿದ್ದು ಸಾವಿರಾರು ಕೋಳಿಗಳು ಸಾವು

ಕಮಲಾಪುರ: ಬಿರುಗಾಳಿ ಸಹಿತ ಮಳೆಯಿಂದಾಗಿ ಕೋಳಿ ಶೆಡ್‌ನ ಮೇಲ್ಚಾವಣಿ ಕಿತ್ತು ಬಿದ್ದು ಸಾವಿರಾರು ಕೋಳಿಗಳು ಸಾವನ್ನಪ್ಪಿದ ಘಟನೆ ಭೀಮನಾಳ ತಾಂಡಾದಲ್ಲಿ ಶುಕ್ರವಾರ ಜರುಗಿದೆ.

ಜೈರಾಮ್ ಗೇಮು ರಾಠೋಡ್ ಎಂಬುವವರು ೮ ಲಕ್ಷ ರೂ. ಗಳಲ್ಲಿ ಶೆಡ್ ನಿರ್ಮಿಸಿ, ಸುಮಾರು ೫ ಸಾವಿರ ಕೋಳಿಗಳನ್ನು ಸಾಕಿದ್ದರು. ಇದೀಗ ಬಿರುಗಾಳಿಯಿಂದ ಶೆಡ್ ಉರುಳಿ ಬಿದ್ದು, ಸುಮಾರು ೩ ಸಾವಿರಕ್ಕೂ ಅಧಿಕ ಕೋಳಿ ಮರಿಗಳು ಮೃತಪಟ್ಟಿವೆ.

ಭೀಮನಾಳ ತಾಂಡಾಕ್ಕೆ ತಾಲೂಕು ಪಶು ವೈದ್ಯಾಧಿಕಾರಿ ಅನುಜಕುಮಾರ ಅವರು ಭಾನುವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಲ್ಲಿಕಾರ್ಜುನ ಬಿರಾದಾರ, ಬಾಬು ಚವ್ಹಾಣ್, ಜೈರಾಮ ಗೇಮು ರಾಠೋಡ್ ಇತರರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net