

ಶ್ರೀರಂಗಪಟ್ಟಣ: ಪಟ್ಟಣದ ಪುರಾತನ ಶ್ರೀ ಗಂಗಾಧರೇಶ್ವರಸ್ವಾಮಿ ದೇಗುಲ ಮುಂಭಾಗದ ಬೃಹತ್ ಅರಳಿ ಮರದ ಎರಡು ದೊಡ್ಡ ಕೊಂಬೆಗಳು ಗುರುವಾರ ಸಂಜೆ ಬೀಸಿದ ಭಾರಿ ಗಾಳಿಗೆ ಮುರಿದು ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ವ್ಯಕ್ತಿಯೋಬ್ಬರು ಪಾರಾಗಿದ್ದಾರೆ.
ಪಟ್ಟಣದ ಶ್ರೀ ಗಂಗಾಧರೇಶ್ವರಸ್ವಾಮಿ ದೇಗುಲ ಮುಂಭಾಗದ ಅಶ್ವತ್ಥ ಕಟ್ಟೆಯಲ್ಲಿದ್ದ ನೂರಾರು ವರ್ಷಗಳಷ್ಟು ಹಳೆಯದಾದ ಈ ಮರದ ಕೆಲ ಭಾಗಗಳು ಟೊಳ್ಳಾಗಿದ್ದು, ಘಟನೆಗೆ ಪ್ರಮುಖ ಕಾರಣವಾಗಿದೆ. ದೇವಾಲಯ ಸಂಜೆ 6ರ ಬಳಿಕ ತೆರೆಯುವುದರಿಂದ ಸಂಜೆ 5ರ ವೇಳೆ ಈ ಘಟನೆ ನಡೆದಿದ್ದು, ಭಕ್ತರು, ದೇವಾಲಯದ ಸಿಬ್ಬಂದಿ ಯಾರೂ ಇಲ್ಲದ ಕಾರಣ ದೊಡ್ಡ ಅವಘಡ ತಪ್ಪಿದಂತಾಗಿದೆ. ಆದರೆ ಆ ಸಮಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮುಚ್ಚಿದ ಬಾಗಿಲ ಮುಂಭಾಗ ನಿಂತು ಸ್ವಾಮಿಗೆ ಕೈ ಮುಗಿಯುತ್ತಿದ್ದ ವೇಳೆ ಕೊಂಬೆ ಮುರಿಯುವುದನ್ನು ಕಂಡು ತಕ್ಷಣವೇ ಪಕ್ಕಕ್ಕೆ ಹಾರಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಟ್ಟಣ ವ್ಯಾಪ್ತಿಯಲ್ಲಿ ಒಣಗಿದ ಮರಗಳು ಹಾಗೂ ಟೊಳ್ಳಾಗಿ ಜೋತುಬಿದ್ದ ಕೊಂಬೆಗಳನ್ನು ಅರಣ್ಯ ಇಲಾಖೆ ಗುರುತಿಸಿ ಅವುಗಳನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರಿಗೆ ರಕ್ಷಣೆ ಒದಗಿಸಬೇಕು ಎಂದು ಪುರಜನರು ಆಗ್ರಹಿಸಿದ್ದಾರೆ.