

ಚಾಮರಾಜನಗರ: ಕಳೆದ ವರ್ಷ ಇಸ್ರೋ ಉಡಾವಣೆ ಮಾಡಿದ ಚಂದ್ರಯಾನ-3 ಬಾಹ್ಯಾಕಾಶ ನೌಕೆ, ಮಂಗಳಯಾನ ನೌಕೆ, ಎಆರ್‌ಎನ್‌ಎಸ್‌ಎಸ್ 1-10 ನೌಕೆ ಹಾಗೂ ಇನ್ನಿತರೆ ಬಾಹ್ಯಾಕಾಶ ನೌಕೆಗಳ ವಸ್ತು ಪ್ರದರ್ಶನ ಗಮನಸೆಳೆಯಿತು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಹೊಸ ಕೆಡಿಪಿ ಸಭಾಂಗಣದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಗ್ರಾವಿಟಿ ಸೈನ್ಸ್ ೌಂಡೇಶನ್ ಸಹಯೋಗದಲ್ಲಿ ವಿಶ್ವ ಬಾಹ್ಯಾಕಾಶ ಸಪ್ತಾಹ-2025 ರ ಅಂಗವಾಗಿ ಸೋಮವಾರ ಆಯೋಜಿಸಿದ್ದ ವಿದ್ಯಾರ್ಥಿ ಕಾರ್ಯಾಗಾರ ಮತ್ತು ವಸ್ತು ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯಗಳಿವು.
ದೇಶದಲ್ಲಿ 1969 ರಲ್ಲಿ ಪ್ರಾರಂಭವಾದ ಇಸ್ರೋ ಸಂಸ್ಥೆ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನದೇಯಾದ ಮೈಲಿಗಲ್ಲನ್ನು ಸಾಧಿಸಿದೆ. ಆ ಸಂಸ್ಥೆ ಉಡಾವಣಾ ವಾಹನಗಳು, ಹಲವಾರು ಬಾಹ್ಯಾಕಾಶ ನೌಕೆಗಳ ಮಾದರಿಯನ್ನು ಪ್ರದರ್ಶನಕ್ಕೆ ಹಿಡಲಾಗಿತ್ತು. ಅದಲ್ಲದೇ ಇಸ್ರೋ ಮತ್ತು ಬಾಹ್ಯಾಕಾಶ ಕ್ಷೇತ್ರದ ಹಲವಾರು ಉಪಯುಕ್ತ ಮಾಹಿತಿಗಳನ್ನು ಒಳಗೊಂಡ ಚಾರ್ಟ್‌ಗಳನ್ನು ಪ್ರದರ್ಶನ ಮಾಡಲಾಗಿತ್ತು. ಅವುಗಳನ್ನು ಕೂತೂಹಲದಿಂದ ವೀಕ್ಷಿಸಿದ ವಿದ್ಯಾರ್ಥಿಗಳು ಬಾಹ್ಯಾಕಾಶದ ಕೌತುಕಗಳನ್ನು ತಿಳಿಸಿದರು. ಈ ವೇಳೆ ವಿದ್ಯಾರ್ಥಿಗಳಿಗೆ ಕ್ವೀಜ್, ರಸಪ್ರಶ್ನೆ ಹಾಗೂ ಇನ್ನಿತರೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಚಂದ್ರಶೇಖರ್ ಪಾಟೀಲ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಪುಟ್ಟಗೌರಮ್ಮ, ಇಸ್ರೋ ತಂಡದ ಹಿರಿಯ ವಿಜ್ಞಾನಿಗಳಾದ ಪ್ರಿಯಾಂಕಾ, ರಾಜೇಶ್ವರಿ, ವಿಷ್ಣು ಕಿಶೋರ್ ಪೈ, ವೈಜ್ಞಾನಿಕ ಅಧಿಕಾರಿ ರಚನಾ, ತಾಂತ್ರಿಕ ಅಧಿಕಾರಿ ಮಂಜುನಾಥ್, ಪ್ರಶಾಂತ್, ಅಭಿಲಾಷ್, ಪ್ರಸಾದ್, ಗ್ರಾವಿಟಿ ಸೈನ್ಸ್ ಪೌಂಡೇಶನ್ ಕಾರ್ಯದರ್ಶಿ ಎ.ಎಸ್.ಅಭಿಷೇಕ್, ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ಹಾಗೂ ಇತರರು ಉಪಸ್ಥಿತರಿದ್ದರು.
ಜಗತ್ತಿನಲ್ಲಿ ಇಸ್ರೋಗೆ 5ನೇ ಸ್ಥಾನ:
ದೇಶದ ವಿಜ್ಞಾನಿ ವಿಕ್ರಂ ಸಾರಾಭಾಯಿ ಅವರು ಬಹಳ ಕಡಿಮೆ ವೆಚ್ಚದಲ್ಲಿ ಸ್ಥಾಪಿಸಿದ ಇಸ್ರೋ ಸಂಸ್ಥೆ ಪ್ರಸ್ತುತ ಸಂದರ್ಭದಲ್ಲಿ ಜಗತ್ತಿನಲ್ಲಿ 5ನೇ ಸ್ಥಾನದಲ್ಲಿದೆ ಎಂದು ಯು.ಆರ್.ರಾವ್ ಬಾಹ್ಯಾಕಾಶ ಕೇಂದ್ರದ ಸಹ ನಿರ್ದೇಶಕ ರಾಮನಗೌಡ ವಿ.ನಾಡಗೌಡ ತಿಳಿಸಿದರು. ದೇಶದ ಅಭಿವೃದ್ಧಿಯಲ್ಲಿ ಬಾಹ್ಯಾಕಾಶ ಮತ್ತು ವಿಜ್ಞಾನದ ಕೊಡುಗೆ ಅಪಾರವಾಗಿದೆ. ಯು.ಆರ್.ರಾವ್ ಉಡಾವಣಾ ಕೇಂದ್ರದಲ್ಲಿ ಹೆಚ್ಚಿನ ಉಪಗ್ರಹಗಳನ್ನು ನಿರ್ಮಾಣ ಮಾಡಲಾಗುತ್ತದೆ. ಈವರೆಗೂ 133 ಉಪಗ್ರಹಗಳನ್ನು ತಯಾರಿಸಲಾಗಿದ್ದು, ಬಾಹ್ಯಾಕಾಶ ಸಂಶೋಧನೆಗಳ ಕುರಿತು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಬಾಹ್ಯಕಾಶ ಮತ್ತು ವಿಜ್ಞಾನದ ವಿಚಾರಗಳಲ್ಲಿ ಹೆಚ್ಚಿನ ಕುತೂಹಲ ಮೂಡಿಸಿಕೊಳ್ಳಬೇಕು. ಧನಾತ್ಮಕ ಅಥವಾ ಋಣಾತ್ಮಕ ವಿಚಾರಗಳೇ ಆದರೂ ಪ್ರಶ್ನೆ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು.
-ಮೋನಾರೋತ್, ಜಿಲ್ಲಾ ಪಂಚಾಯಿತಿ, ಸಿಇಓ, ಚಾಮರಾಜನಗರ