ಮೈಸೂರು: ಗುಡಿಯೊಳಗಿನ ದೇವರಲ್ಲಿನ ನಂಬಿಕೆಯಂತೆ ದೇಹದ ಆತ್ಮದೊಳಗಿನ ನಂಬಿಕೆಯು ಪವಿತ್ರವಾದದ್ದು. ಧಾರ್ಮಿಕ ಆಚರಣೆಗಳಲ್ಲಿ ಪರಿಶುದ್ಧತೆ ಅವಶ್ಯವಾಗಿದ್ದು, ಶಿಕ್ಷಣದ ಅವಶ್ಯಕತೆಯಂತೆ ಮಕ್ಕಳಿಗೆ ಧಾರ್ಮಿಕತೆಯ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ಚಂಡೆ ಮೇಳ ಕಲಾಸಂಘದ ಅಧ್ಯಕ್ಷ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಉಡುಪಿ ಶ್ರೀಕೃಷ್ಣ ಮಂದಿರದಲ್ಲಿ ಚಂಡೆ ಮೇಳ ಕಲಾಸಂಘದಿಂದ 12 ವರ್ಷದ ಒಳಗಿನ ಮಕ್ಕಳಿಗಾಗಿ ಸೋಮವಾರ ಆಯೋಜಿಸಿದ್ದ ಉಚಿತ ಧಾರ್ಮಿಕ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಗುರುಗಳಿಗೆ ಗುರುಕಾಣಿಕೆ ಹಾಗೂ ಭಗವದ್ಗೀತಾ ಪುಸ್ತಕ ನೀಡಿ ಗುರುವಂದನೆ ಸಲ್ಲಿಸಿ ಅವರು ಮಾತನಾಡಿದರು.
ಹಿಂದೂ ಧರ್ಮ ಶ್ರೇಷ್ಠವಾದದ್ದು. ಮಕ್ಕಳಲ್ಲಿ ಧಾರ್ಮಿಕತೆಯ ವಾಸ್ತವದ ವಿಚಾರಗಳ ಅರಿವಿನ ಕೊರತೆಯಿಂದ, ಧರ್ಮಕ್ಕೆ ಹಿನ್ನಡೆಯಾಗುತ್ತಿದೆ. ಹಿಂದೆ ವೃದ್ಧಾಶ್ರಮಗಳಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಜನತೆಯಲ್ಲಿ ಸಂಸ್ಕಾರ ಹಾಗೂ ಜೀವನ ಮೌಲ್ಯಗಳ ಕೊರತೆಯಿಂದಾಗಿ ಹಿರಿಯರ ಬಗ್ಗೆ ಗೌರವವಿಲ್ಲದೆ. ಇದರ ಪರಿಣಾಮ ಹಿರಿಯರನ್ನು ವೃದ್ಧಾಶಮಕ್ಕೆ ಸೇರಿಸುತ್ತಿರುವುದು ವಿಷಾದನೀಯ ಎಂದರು.
ದೇವಸ್ಥಾನಗಳು ಕೇವಲ ಪೂಜೆ ಹಾಗೂ ಧಾರ್ಮಿಕ ಆಚರಣೆಗಳಿಗೆ ಸಿಮೀತವಾಗದೆ, ಸಾಮಾಜಿಕ ಕ್ಷೇತ್ರಗಳ ಅಭಿವೃದ್ಧಿಯ ಚಟುವಟಿಕೆಗಳೊಂದಿಗೆ ಸಮಾಜದ ಕುಂದು ಕೊರತೆಗಳಿಗೆ ಸ್ವಂದಿಸುವ ಕೇಂದ್ರಗಳಾಗಬೇಕು ಎಂದು ಹೇಳಿದರು.
ವಿಶೇಷವಾಗಿ ಧಾರ್ಮಿಕ ಶಿಕ್ಷಣ ಶಿಬಿರದಲ್ಲಿ 150ಮಕ್ಕಳಿಗೆ ಸಂಧ್ಯಾವಂದನೆ, ದೇವರ ಪೂಜೆ, ಸ್ತೋತ್ರ, ಸುಕ್ತಾದಿಗಳ ಪಾಠಗಳು ವಿಷ್ಣು ಸಹಸ್ರನಾಮ, ಹಾಗೂ ಹೆಣ್ಣು ಮಕ್ಕಳಿಗೆ ಭಜನೆ ಲಕ್ಷ್ಮೀ ಶೋಭಾನ, ಧಾರ್ಮಿಕ ವಿಧಿಗಳ ಆಚರಣೆ ಬಗ್ಗೆ ಶಿಕ್ಷಣ ನೀಡಲಾಯಿತು. ವಿಶೇಷವಾಗಿ ಕರಾವಳಿಯ ಪ್ರಸಿದ್ಧವಾದ ಚೆಂಡಿಯನ್ನು ಕಲಿಸಿಕೊಡಲಾಯಿತು.
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಆಯೋಜಕರಾದ ಡಾ. ಚಕ್ರಪಾಣಿ, ಸುಚಿತ್ರ, ವಿಘ್ನೇಶ್ವರ ಭಟ್, ಚೇತನ್, ನಾಗಶ್ರೀ, ಚಿತ್ರ, ರಾಮಕೃಷ್ಣರಾವ್, ಗುರುರಾಜ್, ಕುಶಾಲ್ರಾವ್, ಕಾರ್ತಿಕ್‌ರಾವ್, ಸುದರ್ಶನ್ ರಾವ್, ಪ್ರಜ್ವಲ್ ಇತರರು ಇದ್ದರು.