

ತುಮಕೂರು: ಭೂಮಿ ಮತ್ತು ವಸತಿಗೆ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಭೂರಹಿರತರ ಮೇಲೆ ತುಮಕೂರು
ಜಿಲ್ಲಾಡಳಿತ ಗದಾಪ್ರಹಾರ ನಡೆಸಿದೆ.
ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಕಳೆದ 15 ದಿನಗಳಿಂದಲೂ ಶಾಂತಿಯುತವಾಗಿ ನಡೆಸುತ್ತಿದ್ದ ಪ್ರತಿಭಟನೆಯ ಹತ್ತಿಕ್ಕಲು ಪೊಲೀಸರನ್ನು ಬಳಸಿಕೊಂಡು ಟೆಂಟ್ ಕಿತ್ತುಹಾಕಲಾಗಿದೆ. ಭೂಮಿ ಮತ್ತು ವಸತಿ ಹಕ್ಕುಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿರುವ ಭೂಮಿ ಮತ್ತು ವಸತಿ ರಹಿತರಿಗೆ ಭೂಮಿ ಮತ್ತು ವಸತಿ ವ್ಯವಸ್ಥೆ ಕಲ್ಪಿಸಬೇಕೆಂಬ ಆಗ್ರಹದೊಂದಿಗೆ ನಡೆಯುತ್ತಿದ್ದ ಪ್ರತಿಭಟನೆ ನಿರಂತರವಾಗಿ ಮುಂದುವರಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.
ಮೇ 13ರಂದು ಸಿಎಂ ಸಿದ್ದರಾಮಯ್ಯ ತುಮಕೂರು ನಗರಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಧರಣಿ ನಡೆಸದಂತೆ ತಡೆಯುವ ಸಲುವಾಗಿ ಜಿಲ್ಲಾಡಳಿತ ಕಠಿಣ ಕ್ರಮಕೈಗೊಂಡಿದೆ ಎನ್ನಲಾಗಿದ್ದು, ಧರಣಿಯ ನೇತೃತ್ವ ವಹಿಸಿದ್ದ 120ಕ್ಕೂ ಹೆಚ್ಚು ದಲಿತ ಮುಖಂಡರನ್ನು ವಶಕ್ಕೆ ಪಡೆದಿರುವ ಪೊಲೀಸರು ಊರ್ಡಿಗೆರೆ ಪೊಲೀಸ್ ಉಪಠಾಣೆಗೆ ಕರೆದೊಯ್ದರು. ಅಲ್ಲಿಯೂ ಧರಣಿ ಮುಂದುವರಿಸಿದಾಗ ಅಪಾರ ಸಂಖ್ಯೆಯಲ್ಲಿದ್ದ ಪೊಲೀಸ್ ಬಲ
ಪ್ರಯೋಗಿಸಿ ಅವರನ್ನು ಅಲ್ಲಿಂದ ತೆರವುಗೊಳಿಸಲಾಯಿತು.
ಈ ನಡುವೆ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ತರಾತುರಿಯಲ್ಲಿ ಹೊಸ ಆದೇಶ ಹೊರಡಿಸಿದ್ದು, ಜಿಲ್ಲೆಯಲ್ಲಿ ನಿರಂತರ ಧರಣಿ ನಡೆಸಲು ಅನುಮತಿ ಪಡೆಯಬೇಕು ಎಂದು ವಿವಾದಾತ್ಮಕ ಆಜ್ಞೆ ಹೊರಡಿಸಿದ್ದಾರೆ. ಬುಧವಾರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಹಿಳೆಯರು, ಮಕ್ಕಳು, ವೃದ್ಧರು ಎಂಬುದನ್ನು ಲೆಕ್ಕಿಸದೇ ಜಿಲ್ಲಾಧಿಕಾರಿ ಅದೇಶದಂತೆ ಪೊಲೀಸರು ವಶಕ್ಕೆ ಪಡೆದು ಊರ್ಡಿಗೆರೆ ಪೊಲೀಸ್ ಉಪಠಾಣೆಯಿಂದ ಹೊರಗೆ ಕಳುಹಿಸಲು ಯಶಶ್ವಿಯಾದರು. ಭೂಮಿಗಾಗಿ ಶಾಂತಿಯುತ ಹೋರಾಟ ನಡೆಸುತ್ತಿದ್ದ ಭೂರಹಿತರ ಮೇಲೆ ಜಿಲ್ಲಾಡಳಿತದ ಪ್ರಹಾರಕ್ಕೆ ಆಕ್ರೊಶ ವ್ಯಕ್ತಪಡಿಸಿದ ಪ್ರತಿಭಟನಾನಿರತರು ಧರಣಿ ಮುಂದುವರಿಸುವುದಾಗಿ ಹೇಳಿದರು. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ನೂರಾರು ಸಂಖ್ಯೆಯಲ್ಲಿ ಬಡಜನರು ಭೂಮಿ ಮತ್ತು ವಸತಿ ಇಲ್ಲದೆ ಸಮಸ್ಯೆ ಅನುಭವಿಸುತ್ತಿದ್ದು ಮತ್ತೊಂದೆಡೆ ಸರ್ಕಾರಿ ಜಮೀನುಗಳಲ್ಲಿ ವಾಸವಿರುವಂತಹ ಬಡ ಜನರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಮುಖಂಡ ಹಂದ್ರಾಳ ನಾಗಭೂಷಣ ನೇತೃತ್ವದಲ್ಲಿ ಕಳೆದ 15 ದಿನಗಳಿಂದಲೂ ಅಹೋರಾತ್ರಿ ಪ್ರತಿಭಟನೆ ನಡೆಯುತ್ತಿತ್ತು.
ಡಿವೈಎಸ್ಪಿ ಸವಾಲು!: ತುಮಕೂರಿನಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡದೆ ಊರ್ಡಿಗೆರೆ ಪೊಲೀಸ್ ಉಪಠಾಣೆಗೆ ಕರೆದೊಯ್ದ ಪೊಲೀಸರ ವಿರುದ್ಧ ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಚಂದ್ರಶೇಖರ್ ಹಾಗೂ ಪ್ರತಿಭಟನೆ ನೇತೃತ್ವ ವಹಿಸಿದ್ದ ಹಂದ್ರಾಳ ನಾಗಭೂಷಣ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಧೈರ್ಯವಿದ್ದರೆ ಪ್ರತಿಭಟನೆ ಮಾಡಿ ಎಂದು ಡಿವೈಎಸ್ಪಿ ಚಂದ್ರಶೇಖರ್ ಸವಾಲೆಸೆದರು. ನ್ಯಾಯಯುತವಾಗಿ ನಾವು ಪ್ರತಿಭಟನೆಯನ್ನು ಮಾಡುತ್ತೇವೆ, ಅಂಬೇಡ್ಕರ್ ಸಂವಿಧಾನದಲ್ಲಿ ನಮಗೆ ನೀಡಿರುವ ಹಕ್ಕು ಎಂದು ಪ್ರತಿಭಟನಾಕಾರರು ಸವಾಲು ಸ್ವೀಕರಿಸಿದರು.
ಅನುಮತಿ ಇದ್ದರಷ್ಟೇ ಧರಣಿಗೆ ಸಮ್ಮತಿ: ಜಿಲ್ಲೆಯಲ್ಲಿ ವ್ಯಾಪ್ತಿಯಲ್ಲಿ ಯಾವುದೇ ಸಂ, ಸಂಸ್ಥೆಗಳಿಂದ ಸಭೆ, ನಿರಂತರ ಮುಷ್ಕರ, ಧರಣಿ ಮತ್ತಿತರರ ಚಟುವಟಿಕೆಗಳನ್ನು ನಡೆಸುವ ಪೂರ್ವದಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯುವುದು ಕಡ್ಡಾಯಗೊಳಿಸಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಮೇ 6ರಂದು ತರಾತುರಿಯಲ್ಲಿ ಆದೇಶ ಹೊರಡಿಸಿದ್ದಾರೆ. ಧರಣಿ ನಡೆಸುವವರು ವಿದ್ಯುತ್ ಸರಬರಾಜು, ಧ್ವನಿವರ್ಧಕ, ಪೊಲೀಸ್ ಠಾಣೆಗಳಿಂದ ಅನುಮತಿ ಪಡೆಯುವ ಜತೆಗೆ ಸಾರ್ವಜನಿಕರು ಹಾಗೂ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣೆಗೆ ಅಡಚಣೆಯಾಗದಂತೆ ಧರಣಿ ನಡೆಸಲು ಅನುಮತಿ ಪಡೆಯಬೇಕು ಹಾಗೂ ಅನುಮತಿ ಪಡೆಯದೇ ಧರಣಿ ನಡೆಸಿದರೆ ಪೊಲೀಸರು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಯ ತರಾತುರಿ ಆದೇಶದ ಬಗ್ಗೆ ಜಿಲ್ಲಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಬಡವರು ಹಕ್ಕುಗಳಿಗಾಗಿ ಜಿಲ್ಲೆಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅವಕಾಶ ಇಲ್ಲದಂತೆ ಮಾಡಿರುವ ಆದೇಶ ಸರ್ವಾಧಿಕಾರಿ ಧೋರಣೆಯ ಸಂಕೇತ ಎಂದು ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.