ಧರಣಿ ಬಳಿಕ ಬಸ್ ಸಂಚಾರ ಆರಂಭ

11KWR3
Published on

ಕಾರವಾರ: ರಾಜ್ಯ ಸಾರಿಗೆ ಸಂಸ್ಥೆಗಳಲ್ಲಿ ದುಡಿಯುವವರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವಂತೆ ಆಗ್ರಹಿಸಿ ಎನ್​ಡಬ್ಲ್ಯುಕೆಆರ್​ಟಿಸಿ ನೌಕರರು ಜಿಲ್ಲೆಯ ವಿವಿಧೆಡೆ ಶುಕ್ರವಾರ ಹಠಾತ್ ಧರಣಿ ನಡೆಸಿದರು.

ಯಲ್ಲಾಪುರದಲ್ಲಿ ಬಸ್​ಗಳ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಕಾರವಾರದಲ್ಲಿ ಕೆಲವು ಬಸ್​ಗಳು ಮಾತ್ರ ಓಡಾಟ ನಡೆಸಿದವು. ಬಸ್ ನಂಬಿಕೊಂಡು ಬಂದ ಹಲವು ಪ್ರಯಾಣಿಕರು ಸಂಕಷ್ಟ ಎದುರಿಸಬೇಕಾಯಿತು. ಶಿರಸಿ, ಅಂಕೋಲಾ, ಭಟ್ಕಳ, ಕುಮಟಾ, ಸಿದ್ದಾಪುರ ಭಾಗದಲ್ಲಿ ಬಸ್ ಸಂಚಾರ ಸಹಜವಾಗಿ ನಡೆಯಿತು.

ಕಾರವಾರದಲ್ಲಿ ಬಸ್ ಚಾಲಕರು, ನಿರ್ವಾಹಕರು ಹಾಗೂ ಸಾರಿಗೆ ಘಟಕದ ತಂತ್ರಜ್ಞರು ನಿಲ್ದಾಣದಲ್ಲಿ ಹಠಾತ್ ಧರಣಿ ಕುಳಿತರು. ಸರ್ಕಾರದ ವಿರುದ್ಧ ಘೊಷಣೆ ಕೂಗಿದರು. ಕೆಲ ಹೊತ್ತಿನ ಬಳಿಕ ಧರಣಿ ಕೈಬಿಟ್ಟು ಮತ್ತೆ ಬಸ್​ಗಳನ್ನು ಓಡಿಸಿದರು.

ಆಗಿದ್ದೇನು..?: ರಾಜ್ಯ ಸಾರಿಗೆ ಸಂಸ್ಥೆಗಳಲ್ಲಿ ದುಡಿಯುವವರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂದು ಆಗ್ರಹಿಸಿ ಗುರುವಾರ ವಿಧಾನಸೌಧ ಚಲೋ ಆಯೋಜಿಸಲಾಗಿತ್ತು. ಆದರೆ, ಪ್ರತಿಭಟನಾ ನಿರತರನ್ನು ಬಂಧಿಸಲಾಯಿತು. ರಾತ್ರಿ 12 ಗಂಟೆಯಾದರೂ ಮಾತುಕತೆಗೆ ಕರೆದಿಲ್ಲ. ಇದರಿಂದ ರಾಜ್ಯದ ವಿವಿಧೆಡೆ ಸಾರಿಗೆ ನೌಕರರು ಸ್ವಯಂಪ್ರೇರಿತವಾಗಿ ಪ್ರತಿಭಟನೆಗೆ ಇಳಿದಿದ್ದಾರೆ. ಅದರಂತೆ ಕಾರವಾರದಲ್ಲೂ ಪ್ರತಿಭಟನೆ ನಡೆಸಲಾಗಿದೆ. ಸರ್ಕಾರ ಸ್ಪಂದನೆ ನೀಡದೇ ಇದ್ದರೆ ನಾಳೆಯೂ ಮುಷ್ಕರ ಮುಂದುವರಿಯಲಿದೆ ಎಂದು ನೌಕರರೊಬ್ಬರು ಮಾಹಿತಿ ನೀಡಿದ್ದಾರೆ.

ಶಿರಸಿ ವಿಭಾಗದ ಶೇ. 70ರಷ್ಟು ಬಸ್​ಗಳು ಶುಕ್ರವಾರ ಸಂಚಾರ ಮಾಡಿವೆ. ಯಲ್ಲಾಪುರ, ಕಾರವಾರದಲ್ಲಿ ಕೆಲ ಬಸ್​ಗಳು ಓಡಾಡಿಲ್ಲ. ನಾಳೆಯ ಪರಿಸ್ಥಿತಿಯನ್ನು ನೋಡಿ ಬಸ್ ಓಡಿಸಬೇಕೆ ಅಥವಾ ಬೇಡವೇ ಎಂಬ ನಿರ್ಧಾರ ಕೈಗೊಳ್ಳಲಾಗುವುದು. | ವಿವೇಕಾನಂದ ಹೆಗಡೆ ಎನ್​ಡಬ್ಲ್ಯುಕೆಆರ್​ಟಿಸಿ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net