ಧರಣಿ ನಿರತ ರೈತರ ಬಂಧನಕ್ಕೆ ಖಂಡನೆ

Protest
Published on

ಚಿತ್ರದುರ್ಗ: ಬಲವಂತವಾಗಿ ರೈತರ ಜಮೀನುಗಳ ಭೂಸ್ವಾಧೀನಕ್ಕೆ ಮುಂದಾದ ರಾಜ್ಯ ಸರ್ಕಾರದ ನಡೆ ಖಂಡಿಸಿ ದೇವನಹಳ್ಳಿಯಲ್ಲಿ ಈಚೆಗೆ ನಡೆದ ಹೋರಾಟದಲ್ಲಿ ರೈತರನ್ನು, ಮುಖಂಡರನ್ನು ಬಂಧಿಸಿರುವುದನ್ನು ವಿರೋಧಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಬಣದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದಲ್ಲಿ ಮೆರವಣಿಗೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದರು. ಬಂಧಿಸಿರುವ ರೈತರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಪಕ್ಷದ ಜಿಲ್ಲಾ ಸದಸ್ಯ ಡಿ.ಎಂ. ಮಲಿಯಪ್ಪ ಕಾರ್ಪೊರೇಟ್ ಕಂಪನಿಗಳ, ಭೂ ಮಾಲೀಕರ ಪರವಿರುವ ಸಿದ್ದರಾಮಯ್ಯ ಅವರು ದೇವನಹಳ್ಳಿ ಸಮೀಪ, ಚನ್ನರಾಯಪಟ್ಟಣ ಸುತ್ತಮುತ್ತ 13 ಹಳ್ಳಿಗಳಲ್ಲಿ ರೈತರ ಜಮೀನನ್ನು ವಶಪಡಿಸಿಕೊಳ್ಳುವುದಕ್ಕೆ ಅಂಕಿತ ಹಾಕಲು ಮುಂದಾಗಿರುವುದನ್ನು ನೋಡಿದರೆ, ತುರ್ತು ಪರಿಸ್ಥಿತಿ ನೆನಪಾಗುತ್ತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳ ಪರವಿರಬೇಕಿದ್ದ ರಾಜ್ಯ ಸರ್ಕಾರ ಉದ್ಯಮಿಗಳ ಪರವಿದೆ. ಕೃಷಿ ಭೂಮಿ ಉಳಿವಿಗಾಗಿ 1180 ದಿನಗಳಿಂದ ಮುಷ್ಕರ ನಡೆಸುತ್ತಿರುವ ರೈತರು, ಮಹಿಳೆಯರನ್ನು ಕಡೆಗಣಿಸಿದರೆ, ರಾಜ್ಯದಲ್ಲಿ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.

ನಿಂಗಮ್ಮ ಮಾತನಾಡಿ, ಬಲವಂತವಾಗಿ ರೈತರ ಭೂಮಿ ವಶಪಡಿಸಿಕೊಳ್ಳುವ ಅಧಿಕಾರ ರಾಜ್ಯದ ಮುಖ್ಯಮಂತ್ರಿಗೆ ಇಲ್ಲ. ಹೋರಾಟಗಾರರನ್ನು ರಾಜ್ಯ ಸರ್ಕಾರ ಅವಮಾನಿಸಿದೆ. ಪೊಲೀಸರ ಮೂಲಕ ರೈತರು, ಮಹಿಳೆಯರ ಮೇಲೆ ದೌರ್ಜನ್ಯವೆಸಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿ.ಕೆ. ಗೌಸ್‌ಪೀರ್ ಮಾತನಾಡಿ, ಹೋರಾಟನಿರತ ರೈತರು, ಸಿಐಟಿಯು ಮುಖಂಡರನ್ನು ರಾಜ್ಯ ಸರ್ಕಾರ ಬಂಧಿಸಿ ದಬ್ಬಾಳಿಕೆ ನಡೆಸುತ್ತಿದೆ. ಭೂಮಿ ನಮ್ಮ ಹಕ್ಕು ಯಾವ ಕಾರಣಕ್ಕೂ ವಶಪಡಿಸಿಕೊಳ್ಳಲು ಬಿಡುವುದಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ರೈತ, ಕಾರ್ಮಿಕ ವಿರೋಧಿಗಳಾಗಿವೆ ಎಂದು ದೂರಿದರು.

ಸದಸ್ಯ ಟಿ.ತಿಪ್ಪೇಸ್ವಾಮಿ ಮಾತನಾಡಿ, ಅಹಿಂದ ನಾಯಕ ಎನಿಸಿಕೊಳ್ಳುವ ಸಿದ್ದರಾಮಯ್ಯ ಅವರ ಮುಖವಾಡ ಕಳಚಿ ಬಿದ್ದಿದೆ. ರೈತರ, ಕಾರ್ಮಿಕರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದರು.

ಟಿ.ನಿಂಗಣ್ಣ, ಎಚ್.ಒ.ನಾಗರಾಜ್, ನಿರ್ಮಲಾ, ಮಂಜಮ್ಮ, ಕಲ್ಯಾಣಮ್ಮ, ಸೀಬಾ, ಆಶಾ, ರೇಣುಕಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net