ಧನಲಕ್ಷ್ಮೀ ಬ್ಯಾಂಕಿನ 261ನೇ ಶಾಖೆ ಉದ್ಘಾಟನೆ

ಧನಲಕ್ಷ್ಮೀ ಬ್ಯಾಂಕಿನ 261ನೇ ಶಾಖೆ ಉದ್ಘಾಟನೆ
Published on

ಹಾಸನ: ದೇಶದಾದ್ಯಂತ 260 ಶಾಖೆಗಳನ್ನು ಹೊಂದಿರುವ ಧನಲಕ್ಷ್ಮೀ ಬ್ಯಾಂಕ್ ಬುಧವಾರ ಹಾಸನದಲ್ಲಿ 261ನೇ ಶಾಖೆಯನ್ನು ತರೆದಿದೆ. ನಗರದ ಮಿನಿ ವಿಧಾನಸೌಧ ರಸ್ತೆಯಲ್ಲಿ ನೂತನ ಶಾಖೆಯನ್ನು ಬುಧವಾರ ಹಾಸನ ವಿಧಾನ ಸಭಾ ಕ್ಷೇತ್ರದ ಶಾಸಕ ಎಚ್.ಪಿ ಸ್ವರೂಪ್ ಉದ್ಘಾಟಿಸಿದರು.
ಶಾಖೆ ಉದ್ಘಾಟಿಸಿ ಮಾತನಾಡಿದ ಶಾಸಕ ಸ್ವರೂಪ್, ಬ್ಯಾಂಕ್‌ಗಳೆಂದರೆ ಕೇವಲ ವ್ಯಾವಹಾರಿಕ ಕೇಂದ್ರವಲ್ಲ. ಅದು ಜನರ ಆಶೋತ್ತರಗಳನ್ನು ಈಡೇರಿಸುವ ಕೇಂದ್ರ ಎಂಬುದನ್ನು ಬ್ಯಾಂಕ್ ಸಿಬ್ಬಂದಿ ಮರೆಯಬಾರದು. ಸಾರ್ವಜನಿಕರಿಗೆ ತ್ವರಿತ ಸೇವೆ ಒದಗಿಸುವ ಮೂಲಕ ಸಕಾಲದಲ್ಲಿ ಅವರ ಕೋರಿಕೆಗಳಿಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.
ಹಾಸನದಲ್ಲಿ ನೂತನ ಶಾಖೆ ಉದ್ಘಾಟಿಸಿ ಮುನ್ನಡೆಯುತ್ತಿರುವ ಧನಲಕ್ಷ್ಮೀ ಬ್ಯಾಂಕ್ ಸಾರ್ವಜನಿರಿಗೆ ಉತ್ತಮ ಸೇವೆ ಒದಗಿಸಲಿ. ಆ ಮೂಲಕ ಸಮಾಜದ ಅಭ್ಯುದಯಕ್ಕೆ ನೆರವಾಗಲಿ. ಬ್ಯಾಂಕ್‌ನಿಂದ ಸಾರ್ವಜನಿಕರಿಗೆ ಉಪಯುಕ್ತ ಸೌಲಭ್ಯಗಳು ದೊರೆಯಲಿ ಎಂದು ಶುಭ ಹಾರೈಸಿದರು.
ಬ್ಯಾಂಕಿನ ಜನರಲ್ ಮ್ಯಾನೇಜರ್ ಜಾನ್ ವರ್ಗಿಸ್ ಮಾತನಾಡಿ, ಧನಲಕ್ಷ್ಮೀ ಬ್ಯಾಂಕ್ 9 ದಶಕಗಳ ಇತಿಹಾಸ ಹೊಂದಿದೆ. ಕೇರಳದಲ್ಲಿ ಆರಂಭವಾಗಿ ಇದೀಗ ದೇಶದಾದ್ಯಂತ 261 ಶಾಖೆಗಳನ್ನು ಹೊಂದಿದೆ. ಬ್ಯಾಂಕಿಗೆ ಉತ್ತಮವಾದ ಇತಿಹಾಸವಿದ್ದು, ಹಂತ ಹಂತವಾಗಿ ಬೆಳೆದು ಕೋಟ್ಯಂತರ ಗ್ರಾಹಕರಿಗೆ ತನ್ನ ಸೇವೆ ಒದಗಿಸುತ್ತಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಬಿ.ಆರ್ ಬೊಮ್ಮೇಗೌಡ ಮಾತನಾಡಿ, ಬ್ಯಾಂಕುಗಳು ಸಮಾಜಕ್ಕೆ ಆರ್ಥಿಕ ಚೈತನ್ಯ ತುಂಬುತ್ತಿದ್ದು, ಬ್ಯಾಂಕಿನ ಗ್ರಾಹಕರು ಕೂಡ ಅದರ ಸದುಪಯೋಗ ಪಡೆದುಕೊಳ್ಳಬೇಕಿದೆ. ಬ್ಯಾಂಕ್‌ಗಳ ಕಾರ್ಯತತ್ಪರತೆ ಹಾಗೂ ಸಾಮಾಜಿಕ ಕಾಳಜಿಯನ್ನು ಸಮಾಜ ಗಮನಿಸಿದರೆ ಅಂತಹ ಬ್ಯಾಂಕ್‌ಗಳು ಗ್ರಾಹಕ ಸ್ನೇಹಿ ಆಗಲಿದೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಎಸ್.ಎಚ್.ವಾಸುದೇವ್, ಮಂಜುನಾಥ್, ಕೇರಳ ಸಮಾಜದ ಅಧ್ಯಕ್ಷ ಡಾ.ಎನ್.ಎಸ್ ಜ್ಯೋತಿ, ಬ್ಯಾಂಕಿನ ಪ್ರಾದೇಶಿಕ ನಿರ್ದೇಶಕ ಕೆ. ಸತ್ಯನಾರಾಯಣ್, ಮುಖ್ಯ ವ್ಯವಸ್ಥಾಪಕ ವಿಕ್ರಮ್ ಬರನ್ವಾಲ್, ಹಾಸನ ಶಾಖೆಯ ವ್ಯವಸ್ಥಾಪಕ ಬಿ.ಕೃಷ್ಣಕುಮಾರ್, ಸಹಾಯಕ ಶಾಖಾ ವ್ಯವಸ್ಥಾಪಕ ಆನಂದ್ ಮೋಹನ್, ಸ್ಟಾರ್ ಹೆಲ್ತ್ ಆ್ಯಂಡ್ ಅಲೈಡ್ ಇನ್ಯೂರೆನ್ಸ್ ಕಂಪನಿಯ ಹಿರಿಯ ಮಾರಾಟ ವ್ಯವಸ್ಥಾಪಕ ಎಚ್.ಕೆ. ರವಿ ಹಾಗೂ ಬ್ಯಾಂಕ್ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net