ದ್ವೇಷದ ರಾಜಕಾರಣ ಮಾಡುತ್ತಿಲ್ಲ

Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಿಲ್ಲ. ನಗರಸಭೆಯ ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಎಸಗಿಲ್ಲ. ಬಿಡುಗಡೆಯಾಗಿರುವ ಅಲ್ಪಸಂಖ್ಯಾತರ 3 ಕೋಟಿ ರೂ. ಅನುದಾನದಲ್ಲಿ ವಾರ್ಡ್‌ವಾರು ಹಂಚಿಕೆ ಮಾಡಲಾಗಿದೆ ಎಂದು ಶಾಸಕ ಧೀರಜ್ ಮುನಿರಾಜು ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.
ನಗರದ ಅಂಬೇ ಡ್ಕರ್ ಭವನದಲ್ಲಿ ಗುರುವಾರ ಹಮ್ಮಿ ಕೊಂಡಿದ್ದ ವಾಲ್ಮೀಕಿ ಜಯಂತಿ ಬಳಿಕ ಮಾತ ನಾಡಿದ ಅವರು, ನಾನು ಯಾವುದೇ ವಿಷ ಬೀಜ ಬಿತ್ತುವ ರಾಜಕಾರಣ ಮಾಡುತ್ತಿಲ್ಲ. ನನ್ನ ಬಗ್ಗೆ ಆರೋಪ ಮಾಡಿರುವ ನಗರಸಭೆ ಸದಸ್ಯ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಪಕ್ಷ ಎಲ್ಲರಿಗೂ ತಾಯಿ ಇದ್ದಂತೆ. ಆದರೆ, ನಮ್ಮ ಪಕ್ಷದ ಚಿಹ್ನೆ ಅಡಿಯಲ್ಲಿ ನಗರಸಭೆಗೆ ಆಯ್ಕೆಯಾಗಿ ಕಾಂಗ್ರೆಸ್ ಮುಖಂಡರ ತೆ ಸುದ್ದಿಗೋಷ್ಠಿ ನಡೆಸುವುದು ಎಷ್ಟು ಸರಿ.? ಒಂದು ವೇಳೆ ಬಿಜೆಪಿಯಲ್ಲಿ ಇರುವುದಕ್ಕೆ ಆಗದಿದ್ದರೆ, ಬಿಜೆಪಿಗೆ ರಾಜೀನಾಮೆ ನೀಡಿ, ಕಾಂಗ್ರೆಸ್‌ನಿಂದ ಚುನಾವಣೆಯಲ್ಲಿ ಗೆದ್ದು ಪಕ್ಷ ನಿಷ್ಠೆ ಬಗ್ಗೆ ಮಾತನಾಡಬೇಕು
ಎಂದು ನಗರಸಭಾ ಸದಸ್ಯ ಶಿವಶಂಕರ್‌ಗೆ ತಿರುಗೇಟು ನೀಡಿದರು.
ನಾವು ಕಟ್ಟಿ ಬೆಳೆಸಿದ ಮನೆ(ಪಕ್ಷಕ್ಕೆ)ಗೆ ಧೀರಜ್ ಸೇರಿಕೊಂಡಿದ್ದಾರೆ ಎಂಬ ಶಿವಶಂಕರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಯಾರು ಮನೆ ಕಟ್ಟುವುದು?. ಎಲ್.ಕೆ.ಆಡ್ವಾಣಿ ಕಟ್ಟಿದ ಪಕ್ಷದಲ್ಲೇ ಮೋದಿ ಪ್ರಧಾನಿಯಾಗಿದ್ದು. ನರೇಂದ್ರ ಮೋದಿ ಕಟ್ಟಿದ ಪಕ್ಷದಲ್ಲೇ ನಾನು ನಾಯಕನಾಗಿದ್ದೇನೆ. ಯಡಿಯೂರಪ್ಪ ಕಟ್ಟಿದ ಪಕ್ಷದಲ್ಲೇ ಬಸವರಾಜ ಬೊಮ್ಮಾಯಿ, ಸದಾನಂದಗೌಡ ಮುಖ್ಯಮಂತ್ರಿಗಳಾಗಿದ್ದರು. ಅದೇ ಪಕ್ಷಕ್ಕೆ ಪ್ರಸ್ತುತ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿದ್ದಾರೆ. ನನ್ನ ಬಗ್ಗೆ ಮಾತನಾಡುವಂತಿದ್ದರೆ ಕಾಂಗ್ರೆಸ್‌ನಿಂದ ಆಯ್ಕೆಯಾಗಿ ಮಾತನಾಡಲಿ. ಆಗ ನಾನು ಅವರ ಮಾತಿಗೆ ಉತ್ತರಿಸುವೆ ಎಂದು ಕಿಡಿಕಾರಿದರು.
ಯಾವುದೇ ಅಭಿವೃದ್ಧಿ ಕೆಲಸ ಮಾಡುವ ಮುಂಚೆ ಸೂಕ್ತ ಯೋಜನೆ ರೂಪಿಸಬೇಕಾಗುತ್ತದೆ. ಬಳಿಕ ಕಾಮಗಾರಿ ನಡೆಸಬೇಕಾಗುತ್ತದೆ. ಒಂದೇ ವರ್ಷದಲ್ಲಿ ಎಲ್ಲವನ್ನೂ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. 5 ವರ್ಷದಲ್ಲಿ ತಾಲೂಕಿನ ಅಭಿವೃದ್ಧಿ ಮಾಡುತ್ತೇನೆ ಎಂದರು.

ಗ್ಯಾರಂಟಿಗಳ ಸಮಾವೇಶ ಮಾಡಿಲ್ಲ ಏಕೆ?: ನಾನು ದೊಡ್ಡಬಳ್ಳಾಪುರದಲ್ಲಿ ಗೆದ್ದ 10 ತಿಂಗಳೊಳಗೆ 262 ಕೋಟಿ ರೂ. ಮೌಲ್ಯದ ಕಾಮಗಾರಿಗೆ ಅನುದಾನ ತಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡಿದ್ದಾರೆ. ಇದರಲ್ಲಿ ನಾನು ಯಾವುದೇ ರಾಜಕೀಯ ಮಾಡಿಲ್ಲ. ಹೊಸಕೋಟೆ, ನೆಲಮಂಗಲ, ದೇವನಹಳ್ಳಿಯಲ್ಲಿ ಗ್ಯಾರಂಟಿಗಳ ಸಮಾವೇಶ ಮಾಡಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಏಕೆ ಮಾಡಿಲ್ಲ? ಈ ಬಗ್ಗೆ ಯಾವ ಕಾಂಗ್ರೆಸ್ ನಾಯಕರೂ ಮಾತನಾಡಿಲ್ಲ. ನಾಡಿನ ಮುಖ್ಯಮಂತ್ರಿಗಳಿಗೆ ಗೌರವ ಕೊಡಬೇಕೆಂದು ನಾವು ಯಾವುದೇ ಪ್ರಶ್ನೆ ಮಾಡಿಲ್ಲ. ಪ್ರತಿ ಶಂಕುಸ್ಥಾಪನೆ ಕಲ್ಲಲ್ಲೂ ಅಧ್ಯಕ್ಷತೆಯಲ್ಲಿ ನನ್ನ ಹೆಸರಿದೆ. 36 ಕಾಮಗಾರಿಗಳು ಮತ್ತು 49 ಕಾಮಗಾರಿಗಳ ಉದ್ಘಾಟನೆ ಆಗಿದೆ. ಈ ಶಂಕುಸ್ಥಾಪನೆಯ ಕಲ್ಲುಗಳು ಕಾಣಿಸದಿದ್ದರೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಬಹುದು ಎಂದು ಶಾಸಕರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net