

ಬೆಳಗಾವಿ: ರಾಜಕೀಯ ಆರಂಭಿಸಿದ ದಿನದಿಂದಲೂ ನಾನು ದ್ವೇಷ ರಾಜಕಾರಣ ಮಾಡಿಲ್ಲ. ಅಭಿವೃದ್ಧಿ ಒಂದೇ ನಮ್ಮ ಮೂಲ ಮಂತ್ರ. ದ್ವೇಷ ರಾಜಕಾರಣ ನಮ್ಮ ಡಿಕ್ಷನರಿಯಲ್ಲೇ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮೋದಗಾದಲ್ಲಿ ಬುಧವಾರ ಏರ್ಪಡಿಸಿದ್ದ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ ಹಾಗೂ ರಾಜೀವ ಗಾಂಧಿ ಸೇವಾ ಕೇಂದ್ರ ಮತ್ತು ಸಂಜೀವಿನಿ ಸೇವಾ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ದೇಶ ಹಳ್ಳಿಗಳ ದೇಶ, ಹಳ್ಳಿಗಳು ಸುಧಾರಿಸಿದರೆ ದೇಶ ಸುಧಾರಿಸಿದಂತೆ ಎಂದು ಗಾಂಧೀಜಿ ಹೇಳುತ್ತಿದ್ದರು. ಗಾಂಧೀಜಿ ಪರಿಕಲ್ಪನೆಯಡಿ ಗ್ರಾಮಗಳ ಅಭಿವೃದ್ದಿಗೆ ಶ್ರಮಿಸುತ್ತಿರುವೆ. ಗ್ರಾಮಗಳ ಅಭಿವೃದ್ಧಿಯಲ್ಲಿ ನಾನು ಎಂದೂ ರಾಜಕೀಯ ಮಾಡಿಲ್ಲ ಎಂದು ಹೇಳಿದರು.
ಅಧಿಕಾರ ಇದ್ದಾಗ ಕೆಲಸ ಮಾಡೋಣ, ಜನರಿಗೆ ಸಹಾಯ ಮಾಡೋಣ. 2018ರಲ್ಲಿ ಶಾಸಕಿಯಾದ ನಂತರ ಉದ್ಯೋಗ ಖಾತ್ರಿ ಯೋಜನೆಯಲ್ಲಿ 180 ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸಿದ್ದೇನೆ. ಈ ಮಾದರಿ ನೋಡಿ ಬೇರೆ ಕಡೆಯೂ ಅದನ್ನೇ ಆರಂಭಿಸಿದರು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಮಾತನಾಡಿ, ಗ್ರಾಮದಲ್ಲಿ ಮಾರ್ಚ್‌ನಲ್ಲಿ ನಡೆಯಲಿರುವ ಜಾತ್ರೆಯನ್ನು ಎಲ್ಲರೂ ಸೇರಿ ಆಚರಿಸೋಣ. ಮುಖ್ಯ ರಸ್ತೆಯ ಕಾಮಗಾರಿ ಮಳೆಗಾಲ ಮುಗಿದ ಬಳಿಕ ಆರಂಭವಾಗಲಿದೆ ಎಂದರು. ತುಮ್ಮರಗುದ್ದಿಯಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಹುಣಶೀಕಟ್ಟಿ-ಹೊನ್ನಿಹಾಳ ಹಿರೇಮಠದ ಬಸವರಾಜ ದೇವರು, ಹುಕ್ಕೇರಿ ಕ್ಯಾರಗುಡ್ಡದ ಅಭಿನವ ಮಂಜುನಾಥ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ರೇಖಾ ಕಟಬುಗೋಳ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ತಳವಾರ, ತಾಪಂ ಇಒ ರಮೇಶ ಹೆಡಗೆ, ಪಿಡಿಒ ಪ್ರಶಾಂತ ಮುನವಳ್ಳಿ, ಶಂಕರಗೌಡ ಪಾಟೀಲ, ನಾಗೇಶ ದೇಸಾಯಿ, ಬಸವರಾಜ ಮ್ಯಾಗೋಟಿ ಇತರರಿದ್ದರು.