ಮಳವಳ್ಳಿ: ವಿವಾಹ ವಿಚ್ಛೇದನಕ್ಕಾಗಿ ಮುಂದಾಗಿದ್ದ ದಂಪತಿ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರ ಮನವೊಲಿಕೆಗೆ ಮಣಿದು ಮತ್ತೆ ಒಂದಾಗಿ ಸಂಸಾರ ನಡೆಸಲು ಒಪ್ಪಿದರು…!
ತಾಲೂಕಿನ ಯತ್ತಂಬಾಡಿ ಗ್ರಾಮದ ಯೋಗೇಶ್ ಮತ್ತು ಶ್ವೇತಾ ಒಂದಾದ ಜೋಡಿ. ಇವರಿಬ್ಬರೂ ಒಂದೇ ಗ್ರಾಮದವರಾಗಿದ್ದು, ಪ್ರೇಮ ವಿವಾಹವಾಗಿದ್ದರು. ಬಳಿಕ ಕ್ಷುಲ್ಲಕ ಕಾರಣಕ್ಕೆ ಮನಸ್ತಾಪ ಮಾಡಿಕೊಂಡು ವಿಚ್ಛೇದನ ಕೋರಿ ಕಳೆದ ವರ್ಷ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚ್ಛೇದನ ಸಂಬಂಧವಾಗಿ ನ್ಯಾಯಾಧೀಶರು ನೀಡಿದ ದಿನಾಂಕಗಳಂದು ಪಟ್ಟಣದ ನ್ಯಾಯಾಲಯಕ್ಕೆ ಅಲೆಯುತ್ತಿದ್ದರು. ಇಬ್ಬರ ವಾದ ವಿವಾದಗಳನ್ನು ಆಲಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಮಾದೇಶ್ ಅವರು ಇತ್ತೀಚೆಗೆ ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಗಂಡ-ಹೆಂಡತಿಯನ್ನು ಕೂರಿಸಿ ವಿಚ್ಛೇದನ ಪಡೆಯುವುದರಿಂದ ಮುಂದಿನ ಇಬ್ಬರ ಜೀವನವೂ ಕಷ್ಟಕರವಾಗಲಿದೆ ಎಂದು ತಿಳಿಹೇಳಿದ್ದರು. ನ್ಯಾಯಾಧೀಶರ ಮಾತಿನಿಂದ ಪ್ರೇರೇಪಿತರಾಗಿ ವಿಚ್ಛೇದನ ಅರ್ಜಿಯನ್ನು ಹಿಂಪಡೆದರು. ಇಬ್ಬರೂ ಪರಸ್ಪರ ಸಿಹಿ ಹಂಚಿ ಹೂವಿನ ಹಾರ ಬದಲಾಯಿಸಿಕೊಂಡರು. ಒಂದಾದ ದಂಪತಿಗೆ ನ್ಯಾಯಾಲಯದ ಆವರಣದಲ್ಲಿದ್ದವರು ಶುಭ ಹಾರೈಸಿದರು. ವಕೀಲರಾದ ಶ್ರೀಕಂಠಸ್ವಾಮಿ, ಶ್ರೀಧರ, ನಾಗೇಂದ್ರ, ಶಿವಕುಮಾರ್, ನಾಗರತ್ನ, ನೇತ್ರಾ ಇತರರಿದ್ದರು.