

ಯಳಂದೂರು: ತಾಲೂಕಿನಲ್ಲಿ ಈ ಬಾರಿ ಇನ್ನೂ ಮಳೆಯಾಗಿಲ್ಲ. ಈಗಾಗಲೇ ರೈತರು ದ್ವಿದಳ ಧಾನ್ಯಗಳನ್ನು ತಮ್ಮ ಜಮೀನಿನಲ್ಲಿ ಬಿತ್ತಿದ್ದಾರೆ. ಮಳೆ ಇಲ್ಲದೆ ಬೆಳೆ ಒಣಗುವ ಭೀತಿ ಎದುರಾಗಿದ್ದು ರೈತರು ಕಂಗಾಲಾಗಿದ್ದಾರೆ. ವಾರದೊಳಗೆ ಮಳೆ ಬಾರದಿದ್ದಲ್ಲಿ ಸಂಪೂರ್ಣ ಬೆಳೆ ಒಣಗುವ ಸ್ಥಿತಿ ನಿರ್ಮಾಣವಾಗಿದೆ.
ಕೈ ಕೊಟ್ಟ ಮಳೆ: ತಾಲೂಕಿನಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ದ್ವಿದಳ ಧಾನ್ಯಗಳನ್ನು ರೈತರು ಬಿತ್ತುವ ಪರಿಪಾಠವಿದೆ. ಈ ಸಂದರ್ಭದಲ್ಲಿ ಮಳೆಯಾಶ್ರಿತ ಪ್ರದೇಶಗಳ ರೈತರು ಬಿತ್ತನೆ ಮಾಡಿದ್ದಾರೆ. ಈಗಾಗಲೇ ಹೆಸರುಕಾಳು, ಉದ್ದು, ಹುರುಳಿ, ಅಲಸಂದೆಯ ಬಿತ್ತನೆಯನ್ನು ಮಾಡಿ 15 ರಿಂದ 20 ದಿನ ಕಳೆದಿವೆ. ಕೆಲವೆಡೆ ಮೊಳಕೆಯೊಡೆದು ಗಿಡಗಳು ಚಿಗುರೊಡೆದಿದೆ. ಆದರೆ ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಬಿಸಿಲ ಬೇಗೆ ಹೆಚ್ಚಾಗಿದೆ. ತಾಪಮಾನ 35 ರಿಂದ 36 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚು ಮೀರಿದೆ. ಈ ರಣ ಬಿಸಿಲಿಗೆ ಮೊಳಕೆಯ ಚಿಗುರು ಬಾಡತೊಡಗಿದೆ. ಪಂಪ್‌ಸೆಟ್ ಇರುವ ರೈತರು ಅಲ್ಪ ಪ್ರಮಾಣದಲ್ಲಿ ನೀರು ಹಾಯಿಸಿದರೂ ಬೇಸಿಗೆಯಿಂದ ಈ ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಅಲ್ಲದೆ ವಿದ್ಯುತ್ ವ್ಯತ್ಯಯದಿಂದಲೂ ಸಂಪೂರ್ಣವಾಗಿ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಬಹುತೇಕ ರೈತರು ಸಣ್ಣ ಹಿಡುವಳಿದಾರರಾಗಿದ್ದು ಮಳೆಯಾಶ್ರಿತರಾಗಿದ್ದಾರೆ. ಭೂಮಿ ಹದ ಮಾಡಿ ಬಿತ್ತನೆ ಕಾಳನ್ನು ತಂದು ಬಿತ್ತಿದ್ದರೂ ಮಳೆರಾಯ ಕೈಕೊಟ್ಟಿರುವುದರಿಂದ ಸಾಲ ಮಾಡಿ ಫಸಲು ಬೆಳೆಯುವ ಆಸೆ ಹೊಂದಿದ್ದ ರೈತ ಕೈಕಟ್ಟಿ ಕೂರುವ ಸ್ಥಿತಿ ನಿರ್ಮಾಣವಾಗಿದೆ.
ಬಿತ್ತನೆ ಬೀಜ ವಿತರಣೆ: ಕೃಷಿ ಇಲಾಖೆ ವತಿಯಿಂದ ರೈತ ಸಂಪರ್ಕ ಕೇಂದ್ರಗಳ ಮೂಲಕ ಈ ಬಾರಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದೆ. ಈ ಬಾರಿ 68 ಕ್ವಿಂಟಾಲ್ ಉದ್ದು, ಹೆಸರು ಕಾಳು 1.5 ಕ್ವಿಂಟಾಲ್, 6 ಕ್ವಿಂಟಾಲ್ ಅಲಸಂದೆ ಕಾಳಿನ ಬಿತ್ತನೆ ಬೀಜಗಳನ್ನು ರೈತರಿಗೆ ಸಬ್ಸಿಡಿ ದರಗಲ್ಲಿ ಮಾರಾಟ ಮಾಡಲಾಗಿದೆ. ಮಾರ್ಚ್ ತಿಂಗಳಿಂದಲೇ ಭೂಮಿಯನ್ನು ಹದ ಮಾಡಿಕೊಂಡಿದ್ದ ರೈತರು ಏಪ್ರಿಲ್ ಮಧ್ಯ ಭಾಗದಲ್ಲಿ ಇದನ್ನು ಬಿತ್ತನೆ ಮಾಡಿದ್ದಾರೆ. ಆದರೆ ಅಲ್ಲಿಂದೀಚೆಗೆ ತಾಲೂಕಿನಲ್ಲಿ ಮಳೆಯೇ ಬಿದ್ದಿಲ್ಲ. ಹಾಗಾಗಿ ರೈತರು ಕಂಗಾಲಾಗಿದ್ದಾರೆ.
ಚಂಬೆ, ಸೆಣಬನ್ನು ಇಲಾಖೆಯಿಂದ ವಿತರಿಸಲಿ ಭೂಮಿಯನ್ನು ಫಲವತ್ತು ಮಾಡುವ ನಿಟ್ಟಿನಲ್ಲಿ ರೈತರು ತಮ್ಮ ಜಮೀನಿನಲ್ಲಿ ಚಂಬೆ ಹಾಗೂ ಸೆಣಬನ್ನು ಬೆಳೆಯುತ್ತಾರೆ. ಇದನ್ನು ಜಮೀನಿನಲ್ಲಿ ಹೀಗೆ ಬಿತ್ತನೆ ಮಾಡಿ ಇದನ್ನು ಭೂಮಿಯಲ್ಲೇ ನೀರಿನೊಂದಿಗೆ ಕೊಳೆಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಆದರೆ ಈ ಬಾರಿ ಕೃಷಿ ಇಲಾಖೆಯ ವತಿಯಿಂದ ಬಿತ್ತನೆ ಬೀಜವನ್ನೇ ನೀಡುತ್ತಿಲ್ಲ. ಇದನ್ನು ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂಬುದು ರೈತರ ಆಗ್ರಹವಾಗಿದೆ.
ನಾನು ಪ್ರತಿ ವರ್ಷವೂ ಈ ಸಮಯದಲ್ಲಿ ದ್ವಿದಳ ಧಾನ್ಯ ಬೆಳೆಯುತ್ತೇನೆ. ಇದನ್ನು ಭೂಮಿಯ ಫಲವತ್ತತೆ ಹೆಚ್ಚಿಸಲು ಹಾಗೂ ಅಲ್ಪಾವಧಿಯ ಬೆಳೆಯಾಗಿದ್ದು ಇದರ ಲಾಭವನ್ನು ಪಡೆದುಕೊಳ್ಳಲು ರೈತರು ದ್ವಿದಳ ಧಾನ್ಯ ಬೆಳೆಯುತ್ತಾರೆ. ಆದರೆ ಈ ಬಾರಿ ಮಳೆ ಕೈ ಕೊಟ್ಟಿದೆ. ಪಂಪ್‌ಸೆಟ್ ಹೊಂದಿರುವ ರೈತರು ತಮ್ಮ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ. ಆದರೆ ಬಹುತೇಕ ಸಣ್ಣ ರೈತರು ಮಳೆಯನ್ನೇ ಆಶ್ರಯಿಸಿರುವುದರಿಂದ ಈಗ ಮಳೆ ಇಲ್ಲದ ಕಾರಣ ರೈತರು ಕಂಗಾಲಾಗಿದ್ದಾರೆ. ವಾರದೊಳಗೆ ಮಳೆಯಾಗದಿದ್ದರೆ ಪರಿಸ್ಥಿತಿ ಕೈಮೀರುವ ಸಾಧ್ಯತೆ ಇದೆ. ಸೋಮಣ್ಣ ರೈತ, ಗೌಡಹಳ್ಳಿ