ಚಾಮರಾಜನಗರ: ದ್ವಿತೀಯ ಪಿಯುಸಿ (ಪರೀಕ್ಷೆ-1) ಪರೀಕ್ಷೆಗಳನ್ನು ಮಾ. 1 ರಿಂದ 20ರವರೆಗೆ ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ 17 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು, ಪರೀಕ್ಷಾ ಕಾರ್ಯವು ನ್ಯಾಯೋಚಿತವಾಗಿ ನಡೆಯಲೆಂಬ ಸದುದ್ದೇಶದಿಂದ ಹಾಗೂ ಪರೀಕ್ಷಾ ಅಕ್ರಮಗಳನ್ನು ತಡೆಯಲು ಅನುಕೂಲವಾಗುವಂತೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಸಾರ್ವಜನಿಕ ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಆದೇಶ ಹೊರಡಿಸಿದ್ದಾರೆ.
ಚಾಮರಾಜನಗರ ಪಟ್ಟಣದ ಜೆ.ಎಸ್.ಎಸ್ ಮಹಿಳಾ ಪದವಿ ಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಸೇವಾಭಾರತಿ ಪದವಿ ಪೂರ್ವ ಕಾಲೇಜು, ಯಳಂದೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು, ಜೆ.ಎಸ್.ಎಸ್ ಮಹಿಳಾ ಪದವಿ ಪೂರ್ವ ಕಾಲೇಜು, ಗುಂಡ್ಲುಪೇಟೆ ಪಟ್ಟಣದ ದೊಡ್ಡಹುಂಡಿ ಬೋಗಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು, ಜೆ.ಎಸ್.ಎಸ್ ಮಹಿಳಾ ಪದವಿ ಪೂರ್ವ ಕಾಲೇಜು, ಕೆ.ಎಸ್ ನಾಗರತ್ನಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ ಪಟ್ಟಣದ ಎಂ.ಜಿ.ಎಸ್.ವಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಎಸ್.ವಿ.ಕೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ನಿಸರ್ಗ ಪದವಿ ಪೂರ್ವ ಕಾಲೇಜು, ಜೆ.ಎಸ್.ಎಸ್ ಮಹಿಳಾ ಪದವಿ ಪೂರ್ವ ಕಾಲೇಜು, ಲಯನ್ಸ್ ಪದವಿ ಪೂರ್ವ ಕಾಲೇಜು ಹಾಗೂ ರಾಮಾಪುರ ಜೆ.ಎಸ್.ಎಸ್ ಪದವಿ ಪೂರ್ವ ಕಾಲೇಜು, ಹನೂರಿನ ಜಿ.ವಿ.ಗೌಡ ಸರ್ಕಾರಿ ಪದವಿ ಪೂರ್ವ ಕಾಲೇಜು, ಕ್ರಿಸ್ತ ರಾಜ ಪದವಿ ಪೂರ್ವ ಕಾಲೇಜು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ.
ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಬಿ.ಎನ್.ಎಸ್.ಎಸ್ 2023 ಕಲಂ 163ರ ಪ್ರಕಾರ ಪರೀಕ್ಷಾ ದಿನಗಳಂದು ಬೆಳಗ್ಗೆ 6 ರಿಂದ ಸಂಜೆ 4 ಗಂಟೆಯವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ. ಅಲ್ಲದೇ ಸದರಿ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಮತ್ತು ಕಂಪ್ಯೂಟರ್, ಸೈಬರ್ ಅಂಗಡಿಗಳನ್ನು ಬೆಳಗ್ಗೆ 6 ರಿಂದ ಸಂಜೆ 4 ಗಂಟೆಯವರೆಗೆ ಮುಚ್ಚಲು ಸಹ ಆದೇಶಿಸಲಾಗಿದೆ. ಈ ನಿಷೇಧಾಜ್ಞೆಯು ಪರೀಕ್ಷೆಯ ಕೆಲಸಕ್ಕೆ ನಿಯೋಜಿತರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮತ್ತು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶದಲ್ಲಿ ತಿಳಿಸಿದ್ದಾರೆ.