ದ್ವಿತೀಯ ಪಿಯು ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಸಂಬಂಧಿಕರ ಆಕ್ರೋಶ

ದ್ವಿತೀಯ ಪಿಯು ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಸಂಬಂಧಿಕರ ಆಕ್ರೋಶ
Published on

ಹಾಸನ: ನಗರದ ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕಾಲೇಜು ಅಧೀನದ ಹಾಸ್ಟೆಲ್‌ನಲ್ಲಿ ಗುರುವಾರ ಬೆಳಗ್ಗೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ. ಸಾವಿನ ಹಿನ್ನಲೆಯಲ್ಲಿ ಮೃತ ವಿದ್ಯಾರ್ಥಿಯ ಕುಟುಂದವರು ಕಾಲೇಜು ಆಡಳಿತ ಮಂಡಳಿ, ವಾರ್ಡನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದಲ್ಲದೇ ಹಾಸ್ಟೆಲ್ ಒಳಗೆ ಇದ್ದ ಕೆಲ ಪೀಠೋಪರಣವನ್ನು ಒಡೆದು ಹಾಕಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ಬೆಳಗುಲಿ ಗ್ರಾಮದ ಸುರೇಶ್ ಮತ್ತು ಮಮತಾ ದಂಪತಿಯ ಏಕೈಕ ಪುತ್ರ ವಿಕಾಸ್ (18) ಮೃತ ವಿದ್ಯಾರ್ಥಿ.
ವಿದ್ಯಾರ್ಥಿ ಸಾವಿನ ಬಗ್ಗೆ ಖಾಸಗಿ ಕಾಲೇಜು ಆಡಳಿತ ಮಂಡಳಿಯ ಗೌಡೇಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿ ವಿಕಾಸ್ ಅತ್ಯಂತ ಬುದ್ಧಿವಂತ. ಪ್ರತಿಬಾರಿ ಶೇ.95 ಅಂಕ ಗಳಿಸುತ್ತಿದ್ದ ವಿದ್ಯಾರ್ಥಿ. ಗುರುವಾರ ಬೆಳಗ್ಗೆ ಹಾಸ್ಟೆಲ್‌ನಲ್ಲಿ ತಿಂಡಿ ಮುಗಿಸಿ 8 ಗಂಟೆಗೆ ಪರೀಕ್ಷೆ ತಯಾರಿಗಾಗಿ ನಡೆಸುತ್ತಿರುವ ಸ್ಪಷೆಲ್ ಕ್ಲಾಸ್ ಬಂದಿದ್ದಾನೆ. 10 ಗಂಟೆಯವರೆಗೂ ಕಾಲೇಜಿನಲ್ಲಿ ಕುಳಿತಿದ್ದು, ಬಳಿಕ ಬೇರೊಬ್ಬ ವಿದ್ಯಾರ್ಥಿಯಿಂದ ಮೊಬೈಲ್ ಪಡೆದು ತಾಯಿಗೆ ಫೋನ್ ಮಾಡಿ ಕಣ್ಣೀರು ಹಾಕಿದ್ದಾನೆ. ಬಳಿಕ ಶೌಚಾಲಯಕ್ಕೆ ಹೋಗುವುದಾಗಿ ಹೇಳಿ ಹಾಸ್ಟೆಲ್‌ಗೆ ಬಂದಿದ್ದಾನೆ. ವಿಕಾಸ್ ಹತ್ತು-ಹದಿನೈದು ನಿಮಿಷ ಆದರೂ ವಾಪಸ್ ಬಾರದಿದ್ದಾಗ ಕೆಲ ವಿದ್ಯಾರ್ಥಿಗಳು ಆತನನ್ನು ಹುಡುಕಿಕೊಂಡು ಹಾಸ್ಟೆಲ್‌ಗೆ ಬಂದಿದ್ದಾರೆ. ಬಂದು ನೋಡಿದಾಗ ವಿಕಾಸ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಪೋಷಕರು ಸಂಬಂಧಿಕರು ಸ್ಥಳಕ್ಕೆ ಬಂದು ಹಾಸ್ಟೆಲ್ ಹಾಗೂ ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಆಡಳಿತ ಮಂಡಳಿ ಪ್ರಮುಖರು ಬರುವವರೆಗೆ ಮೃತದೇಹ ಎತ್ತಲು ಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಪುತ್ರನ ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆ ನಡೆದು ಮೂರು ಗಂಟೆಯಾದರೂ ಒಬ್ಬರೂ ಬಂದಿಲ್ಲ ಎಂದು ಕಿಡಿಕಾರಿದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸಪಟ್ಟರು.
ವ್ಯಕ್ತಿ ಓರ್ವ ಆಡಳಿತ ಮಂಡಳಿ ಪರವಾಗಿ ಮಾತನಾಡಿದ ಹಿನ್ನೆಲೆಯಲ್ಲಿ ಆತನನ್ನು ಸುತ್ತುವರಿದ ಸಂಬಂಧಿಕರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದರು. ಆಗ ಪೊಲೀಸರು ಆತನನ್ನು ಬಿಡಿಸಿ ಜೀಪ್‌ನಲ್ಲಿ ಕರೆದೊಯ್ದರು. ಮೃತ ವಿಕಾಸ್ ನೇಣು ಬಿಗಿದುಕೊಂಡ ಜಾಗದಲ್ಲಿ ಆತನ ಕಾಲು ನೆಲಕ್ಕೆ ಊರಿತ್ತು. ತುಂಬಾ ಉದ್ದವಾದ ದಾರ ನೆಲದಲ್ಲಿ ಬಿದ್ದಿದೆ. ಆತನ ಎತ್ತರದಷ್ಟು ನೆಲ ಇರುವುದು ಸಾವಿನ ಬಗ್ಗೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಮೃತನ ಸಂಬಂಧಿಕರು ದೂರಿದ್ದಾರೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ಹೆಚ್ಚಿನ ಸಂಖ್ಯೆಯ ಪೊಲೀಸರ ನಿಯೋಜನೆ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ವಿಕಾಸ್ ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ಹಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net