ಹಾಸನ: ದ್ವಿತೀಯ ಪಿಯುಸಿ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಕಳೆದ ಬಾರಿ 11ನೇ ಸ್ಥಾನದಲ್ಲಿದ್ದ ಹಾಸನ, ಈ ಬಾರಿ ಒಂದು ಸ್ಥಾನಕ್ಕೆ ಮೇಲಕ್ಕೇರಿದೆ. ಈ ವರ್ಷ ಶೇ.77.56 ಫಲಿತಾಂಶ ಪಡೆಯುವ ಮೂಲಕ 11ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಶೇಕಡವಾರು ಗಮನಿಸಿದರೆ ಕಳೆದ ಬಾರಿ ಶೇ.85.83 ಫಲಿತಾಂಶ ಪಡೆದುಕೊಂಡಿತ್ತು.
ಈ ಬಾರಿ ಪರೀಕ್ಷೆಗೆ 14,909 ವಿದ್ಯಾರ್ಥಿಗಳು ನೋಂದಾಯಿಸಿಕೊಂಡು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 11,564 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.77.56ರಷ್ಟು ಫಲಿತಾಂಶ ಬಂದಿದೆ. 578 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇವರಲ್ಲಿ ಕೇವಲ 74 ಮಂದಿ ಉತ್ತೀರ್ಣರಾಗಿದ್ದಾರೆ. ಇನ್ನು ಖಾಸಗಿಯಾಗಿ ಪರೀಕ್ಷೆ ಎದುರಿಸಿದ್ದ 370 ಮಕ್ಕಳಲ್ಲಿ 129 ಮಕ್ಕಳು ಪಾಸಾಗಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಮೂರು ವಿಭಾಗಗಳಲ್ಲಿ ಅರಸೀಕೆರೆಯ ಹೊಯ್ಸಳೇಶ್ವರ ಪದವಿಪೂರ್ವ ಕಾಲೇಜಿನ ಎಚ್.ಎಸ್. ಕಿರಣ್ ಮಯಿ 581 ಅಂಕ ಪಡೆದು ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಹಾಸನದ ಸೆಂಟ್ರಲ್ ಕಾಮರ್ಸ್ ಪದವಿಪೂರ್ವ ಕಾಲೇಜಿನ ಪಿ. ಗಗನ್ ಗೌಡ ಪ್ರಥಮ 593 ಅಂಕ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ವಿಜ್ಞಾನ ವಿಭಾಗದಲ್ಲಿ ಹಾಸನದ ಮಾಸ್ಟರ್ಸ್ ಪದವಿಪೂರ್ವ ಕಾಲೇಜಿನ ಜೆ.ಪ್ರಣತಿ 597 ಅಂಕ ಪಡೆದು ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ಮೂರನೇ ರ‌್ಯಾಂಕ್ ಬಂದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕಲಾ ವಿಭಾಗದಲ್ಲಿ 2,766 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು ಅವರಲ್ಲಿ 1,604 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 5,073 ಮಕ್ಕಳು ಪರೀಕ್ಷೆ ಬರೆದು 3,929 ಮಂದಿ ತೇರ್ಗಡೆಯಾಗಿದ್ದಾರೆ. ಇನ್ನು ವಿಜ್ಞಾನ ವಿಭಾಗದಲ್ಲಿ 7070 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಇವರಲ್ಲಿ 6031 ಮಕ್ಕಳು ತೇರ್ಗಡೆಯಾಗಿದ್ದಾರೆ.
ಈ ಬಾರಿಯು ಕೂಡ ಜಿಲ್ಲೆಯಲ್ಲಿ ಬಾಲಕಿಯರು ಮೇಲುಗೈ ಸಾಧಿಸುವ ಮೂಲಕ ಅತಿ ಹೆಚ್ಚು ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ. 8,978 ವಿದ್ಯಾರ್ಥಿನಿಯರು ಪರೀಕ್ಷೆ ತೆಗೆದುಕೊಂಡಿದ್ದರು. ಅವರಲ್ಲಿ 7,060 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ. ಬಾಲಕರು 6,881 ಪರೀಕ್ಷೆಗೆ ನೋಂದಾಯಿಸಿದ್ದರು ಅವರಲ್ಲಿ 4707 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ನಗರ ಪ್ರದೇಶದಲ್ಲಿ 12,087 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ 9,571 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಗ್ರಾಮೀಣ ಪ್ರದೇಶದಿಂದ 2,822 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು ಅವರಲ್ಲಿ 1,993 ಮಕ್ಕಳು ಪಾಸಾಗಿದ್ದಾರೆ.