

ಧಾರವಾಡ: ಜಿಲ್ಲೆಯಲ್ಲಿ ಸೆ. 7ರಿಂದ 19ರವೆಗೆ ದ್ವಿತೀಯ ಪಿಯು ಪೂರಕ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೇಂದ್ರದ 200 ಮೀ. ಪ್ರದೇಶವನ್ನು ಸಿಆರ್ಪಿಸಿ 1973ರ ಕಲಂ 144ರ ಮೇರೆಗೆ ನಿರ್ಬಂಧಿತ ಪ್ರದೇಶ ಎಂದು ಘೊಷಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಕೇಂದ್ರದ ಸುತ್ತ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಧ್ವನಿವರ್ಧಕಗಳ ನಿಷೇಧ ಹಾಗೂ ಸಮೀಪದ ಝೆರಾಕ್ಸ್ ಅಂಗಡಿಗಳು ಪರೀಕ್ಷಾ ಅವಧಿಯಲ್ಲಿ ಕಾರ್ಯನಿರ್ವಹಿಸದಂತೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಪರೀಕ್ಷೆಗಳಲ್ಲಿ ನಡೆಯಬಹುದಾದ ಅವ್ಯವಹಾರ ತಡೆಗಟ್ಟಲು ಹಾಗೂ ಸುಗಮವಾಗಿ ನಡೆಯಲು ಜಿಲ್ಲಾಮಟ್ಟದಲ್ಲಿ ಜಿಲ್ಲಾ ಮಟ್ಟದ ಜಾಗೃತ ದಳವನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಹಾಗೂ ತಾಲೂಕಾ ಮಟ್ಟದ ಜಾಗೃತ ದಳಗಳನ್ನು ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. ದಳದ ಸದಸ್ಯರು ತಮ್ಮ ಕಾರ್ಯ ವ್ಯಾಪ್ತಿಯಲ್ಲಿನ ಎಲ್ಲ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಅವ್ಯವಹಾರಗಳು ನಡೆಯದಂತೆ ಸೂಕ್ತ ಕ್ರಮ ಜರುಗಿಸಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 13 ಪರೀಕ್ಷಾ ಕೇಂದ್ರಗಳಿವೆ. ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30, ಮಧ್ಯಾಹ್ನ 2.15 ರಿಂದ ಸಂಜೆ 5.30ರ ಪರೀಕ್ಷೆಗಳು ನಡೆಯಲಿವೆ. ಕೇಂದ್ರಗಳಿಗೆ ಗೆಜೆಟೆಡ್ ಅಧಿಕಾರಿಗಳನ್ನು ವಿಶೇಷ ವೀಕ್ಷಕರೆಂದು (ಸಿಟ್ಟಿಂಗ್ ಸ್ಕಾ್ವಡ್) ನೇಮಕ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.