

ತಿ.ನರಸೀಪುರ: ಪಟ್ಟಣ ಸೇರಿದಂತೆ ವಿವಿಧೆೆಡೆ ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪಟ್ಟಣ ಪೋಲೀಸರು ಮಂಗಳವಾರ ಬಂಧಿಸಿದ್ದಾರೆ.
ತಾಲೂಕಿನ ರಂಗನಾಥಪುರ ಗ್ರಾಮದ ವಿಜಯ್(20), ಪ್ರದೀಪ(21) ಬಂಧಿತ ಆರೋಪಿಗಳು. ಇವರು ಪಟ್ಟಣ ಸೇರಿದಂತೆ ಬನ್ನೂರು, ಕಿರುಗಾವಲು, ಸಂತೇಮರಳ್ಳಿ ವ್ಯಾಪ್ತಿಯಲ್ಲಿ 16ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದರು.
ನಂಜನಗೂಡು ಉಪವಿಭಾಗದ ಡಿವೈಎಸ್ಪಿ ಗೋವಿಂದರಾಜು, ಪಟ್ಟಣ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಜೆ.ಎನ್.ಆನಂದ್‌ಕುಮಾರ್ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಪಿಎಸ್‌ಐ ಅಶೋಕ್ ಕುಮಾರ್, ಪಿಎಸ್‌ಐ ಜಗದೀಶ್ ದೂಳ್‌ಶೆಟ್ಟಿ ನೇತೃತ್ವ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, 10 ಲಕ್ಷ ರೂ.ಮೌಲ್ಯದ 16 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಲತೀಫ್, ಭಾಸ್ಕರ್, ಆನಂದ್, ಪ್ರಭಾಕರ್ ಭಾಗವಹಿಸಿದ್ದರು.