

ಬೆಂಗಳೂರು ಗ್ರಾಮಾಂತರ: ಹೊಸಕೋಟೆ ನಗರದ ಕೆ.ಆರ್.ರಸ್ತೆ, ತೇರುಬೀದಿ ಮತ್ತಿತರ ಕಡೆ ಸೋಮವಾರ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ದ್ವಿಚಕ್ರವಾಹನದಲ್ಲಿ ಸಂಚರಿಸಿ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದರು. ನಗರಸಭೆ ಅಧ್ಯಕ್ಷ, ಅಧಿಕಾರಿಗಳ ತಂಡ ಸಾಥ್ ನೀಡಿತು.
ಹೊಸಕೋಟೆ ವಿಧಾನಸಭಾ ಕ್ಷೇತ್ರ ನನ್ನ ಕರ್ಮಭೂಮಿ ಎಂದು ಪುನರುಚ್ಚರಿಸಿದ ಸಚಿವ ಎಂಟಿಬಿ ನಾಗರಾಜ್, ಈ ಹಿಂದಿನಿಂದಲೂ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಲೇ ಬಂದಿದ್ದೇನೆ, ಇಲ್ಲಿನ ಜನ ನನ್ನ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮೂರು ಬಾರಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಅವರ ಋಣ ನನ್ನ ಮೇಲಿದೆ, ಅಧಿಕಾರವಿದ್ದಾಗ ಪ್ರಾಮಾಣಿಕವಾಗಿ ಜಸಸೇವೆ ಮಾಡಬೇಕೆಂಬ ಸಿದ್ದಾಂತ ನನ್ನದು. ಅದೇ ರೀತಿಯಲ್ಲಿ ನನ್ನ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ ಎಂದರು.
ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುವಾಗ ಜನರೂ ಈ ಬಗ್ಗೆ ನಿಗಾವಹಿಸಬೇಕು. ಎಲ್ಲಿಯಾದರೂ ಲೋಪ ಕಂಡುಬಂದರೆ ಕೂಡಲೇ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.
ಸಮಸ್ಯೆ ಆಲಿಸಿದ ಸಚಿವರು: ಹೊಸಕೋಟೆಯ ಹಲವು ಕಡೆಗಳಲ್ಲಿ ದ್ವಿಚಕ್ರವಾಹನದಲ್ಲಿ ಸಂಚರಿಸಿ ಕಾಮಗಾರಿ ಪರಿಶೀಲಿಸಿದ ಬಳಿಕ ಕಾಲ್ನಡಿಗೆ ಮೂಲಕ ತೆರಳಿ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು. ಕುಡಿಯುವ ನೀರು ಪೂರೈಕೆ ಹೇಗಿದೆ, ಸ್ಥಳೀಯವಾಗಿ ಕಸ ನಿರ್ವಹಣೆಯಲ್ಲಿ ಏನಾದರು ಸಮಸ್ಯೆಗಳಿವೆಯೇ ಎಂಬುದರ ಬಗ್ಗೆ ಮಾಹಿತಿ ಪಡೆದು ಸ್ಥಳದಲ್ಲಿದ ಅಧಿಕಾರಿಗಳ ಗಮನಕ್ಕೆ ತಂದು ಯಾವುದೇ ಸಮಸ್ಯೆ ಆಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ತಾಕೀತು ಮಾಡಿದರು.
ಜನರ ತೆರಿಗೆ ಹಣದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಇದರಲ್ಲಿ ಲೋಪ ಮಾಡಿದರೆ ಸಾರ್ವಜನಿಕರಿಗೆ ಅನ್ಯಾಯ ಮಾಡಿದಂತೆ. ಈ ವಿಷಯಲ್ಲಿ ಎಲ್ಲಿಯೂ ಹೊಂದಾಣಿಕೆಗೆ ಅವಕಾಶವಿಲ್ಲ. ಲೋಪ ಕಂಡುಬಂದರೆ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು. ಗುತ್ತಿಗೆಪಡೆದವರ ಮೇಲೂ ಅಗತ್ಯಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.