ದ್ವಾರಸಮುದ್ರ ಕೆರೆಗೆ ಬಾಗಿನ ಅರ್ಪಣೆ

ಹಳೇಬೀಡಿನ ದ್ವಾರಸಮುದ್ರ ಕೆರೆಯು ಸತತವಾಗಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಬಾಗಿನ ಅರ್ಪಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್, ಮುಖಂಡ ಸೋಮಶೇಖರ್, ಶಿವನಾಗ್, ಪ್ರಸನ್ನ ಇನ್ನಿತರರಿದ್ದರು.
10hbd1
Published on

ಹಳೇಬೀಡು: ವರ್ಷಧಾರೆಯಿಂದ ತುಂಬಿ ಹರಿಯುತ್ತಿರುವ ದ್ವಾರಸಮುದ್ರ ಕೆರೆಗೆ ಬುಧವಾರ ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬಿಜೆಪಿ ಮುಖಂಡರು ಹಾಗೂ ಸ್ಥಳೀಯರು ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.


ಸತತ ಮೂರನೇ ಬಾರಿಗೆ ಕೋಡಿ ಬಿದ್ದಿರುವ ಐತಿಹಾಸಿಕ ದ್ವಾರಸಮುದ್ರ ಕೆರೆಗೆ ಮಹಿಳೆಯರು ಗಂಗಾಪೂಜೆ ನೆರವೇರಿಸಿದರು. ಪೂರ್ಣಕುಂಭಗಳಲ್ಲಿ ಸಂಗ್ರಹಿಸಿದ ನೀರಿಗೆ ಮಂಗಳದ್ರವ್ಯಗಳನ್ನು ಅರ್ಪಿಸಿದ ಬಳಿಕ ಪುಷ್ಪಗಿರಿ ಶ್ರೀಗಳನ್ನು ಸ್ವಾಗತಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಹಾಗೂ ಇತರ ಮುಖಂಡರು ಮಂಗಳವಾದ್ಯದೊಂದಿಗೆ ಹೆಜ್ಜೆ ಹಾಕಿ ಪೂಜೆಯಲ್ಲಿ ಪಾಲ್ಗೊಂಡರು.


ತುಂಬಿದ ಕೆರೆಗೆ ಬಾಗಿನ ಅರ್ಪಿಸಿದ ಬಳಿಕ ಹುಲ್ಲಹಳ್ಳಿ ಸುರೇಶ್ ಮಾತನಾಡಿ, ಕಳೆದ ವರ್ಷ ಐತಿಹಾಸಿಕ ಕೆರೆಯ ಏರಿಯು ಕುಸಿದು ಬಿರುಕು ಬಿಟ್ಟಾಗ ಆತಂಕ ಮನೆಮಾಡಿತ್ತು. ಆಗ ಜಲಸಂಪನ್ಮೂಲ ಸಚಿವರಾಗಿದ್ದ ಮಾಧುಸ್ವಾಮಿ ಹಾಗೂ ಉಸ್ತುವಾರಿ ಸಚಿವ ಗೋಪಾಲಯ್ಯ ಅವರ ಪ್ರಾಮಾಣಿಕ ಪ್ರಯತ್ನ ಮತ್ತು ಆಸಕ್ತಿಯಿಂದಾಗಿ ಕೆಲವೇ ತಿಂಗಳಲ್ಲಿ ಏರಿಯನ್ನು ದುರಸ್ತಿಗೊಳಿಸಿ, ರಸ್ತೆಯನ್ನೂ ವಿಸ್ತರಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಯಿತು. ಮಳೆ ಕಡಿಮೆಯಾದ ಬಳಿಕ ಡಾಂಬರ್ ಹಾಕುವ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಜತೆಗೆ, ಕೋಡಿಯಿಂದ ಹೊರಹೋಗುವ ನೀರು ಬೂದಿಗುಂಡಿ ಬಡಾವಣೆಯ ಪಕ್ಕದಲ್ಲೇ ಹರಿಯುವುದರಿಂದ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಸೂಕ್ತ ಪರಿಹಾರ ಯೋಜನೆ ರೂಪಿಸಲಾಗುವುದು ಎಂದರು.


ಸಾನ್ನಿಧ್ಯ ವಹಿಸಿದ್ದ ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅತಿವೃಷ್ಟಿಯಿಂದ ಈ ಬಾರಿ ರೈತರು ಇನ್ನಿಲ್ಲದ ಸಂಕಷ್ಟ ಎದುರಿಸುವ ಸ್ಥಿತಿ ಬಂದಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ಕಟಾವಿಗೆ ಬಂದಿದ್ದ ಸೂರ್ಯಕಾಂತಿ ಬೆಳೆ ನೆಲಕಚ್ಚಿದೆ. ಇನ್ನು ತರಕಾರಿ ಬೆಳೆಗಳ ಸ್ಥಿತಿಯೂ ಶೋಚನೀಯವಾಗಿದೆ. ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿರುವ ಸಂತಸ ಒಂದೆಡೆಯಾದರೆ, ಹಾನಿಯ ಬಗ್ಗೆ ಚಿಂತಿಸಿದಾಗ ಬೇಸರವಾಗುತ್ತದೆ. ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಎಂದು ಹೇಳಿದರು.


ಶ್ರೀಮಠದ ಆಡಳಿತಾಧಿಕಾರಿ ಕಿಟ್ಟಪ್ಪ, ಬಿಜೆಪಿ ಮುಖಂಡರಾದ ಎಚ್.ಎಂ. ಗೋವಿಂದಪ್ಪ, ಈಶ್ವರ್, ಜಿ.ಪ್ರಸನ್ನ, ಶಂಕರ್ ನಾಗ್ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net