ದ್ವಾರಸಮುದ್ರ ಕೆರೆ ಭರ್ತಿ

20hbd2
Published on

ಹಳೇಬೀಡು: ಇಲ್ಲಿನ ಐತಿಹಾಸಿಕ ದ್ವಾರಸಮುದ್ರ ಕೆರೆ ಭರ್ತಿಯಾಗಿದ್ದು ಶುಕ್ರವಾರ ಮಧ್ಯಾಹ್ನ ಕೋಡಿಬಿದ್ದಿದೆ.

ಸಾಮಾನ್ಯವಾಗಿ ಮಳೆಗಾಲ ಮುಗಿಯುವ ಸೆಪ್ಟೆಂಬರ್ ಅಂತ್ಯಕ್ಕೆ ತುಂಬುತ್ತಿದ್ದ ಕೆರೆಯು ಈ ಬಾರಿ ಜೂನ್‌ನಲ್ಲೇ ಭರ್ತಿಯಾಗಿ ಕೋಡಿ ಬಿದ್ದಿದೆ. ಮುಂಬರುವ ದಿನಗಳಲ್ಲಿ ಕೆರೆಗೆ ಹೆಚ್ಚಿನ ನೀರು ಹರಿದುಬರುವ ಸಾಧ್ಯತೆಯಿದ್ದು, ವರ್ಷವಿಡೀ ತುಂಬಿ ಹರಿಯುವ ನಿರೀಕ್ಷೆ ಇದೆ. 1,000 ಎಕರೆ ವಿಸ್ತೀರ್ಣದ ರಾಷ್ಟ್ರಕೂಟರ ಕಾಲದ ಕೆರೆಯ ಏರಿ 2021ರಲ್ಲಿ ಬಿರುಕುಬಿಟ್ಟು ಕುಸಿದಿದ್ದರಿಂದ ಅಪಾರ ಪ್ರಮಾಣದ ನೀರು ಪೋಲಾಗಿತ್ತು. 2022ರಲ್ಲಿ ಕೆರೆ ಏರಿಯ ದುರಸ್ತಿ ಕಾಮಗಾರಿ ಮುಗಿದು ನಾಲ್ಕು ತಿಂಗಳ ಬಳಿಕ ಯಗಚಿ ಏತ ನೀರಾವರಿ ಯೋಜನೆಯ ನಾಲೆಯಲ್ಲಿ ನೀರು ಹರಿಸಿ ಕೆರೆಗಳನ್ನು ತುಂಬಿಸಲಾಗಿತ್ತು. ಈ ಬಾರಿ ಮುಂಗಾರು ಪೂರ್ವ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಮೇ ತಿಂಗಳಲ್ಲೇ ಕೆರೆಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದರಿಂದ ಸಾಮಾನ್ಯ ಅವಧಿಗೂ ಮುನ್ನವೇ ದ್ವಾರಸಮುದ್ರ ಕೆರೆಯು ಭರ್ತಿಯಾಗಿದೆ.

ಎತ್ತಿನಹೊಳೆ ನಾಲೆ ನೀರು:

ಎತ್ತಿನಹೊಳೆ ಯೋಜನೆಯಡಿಯಲ್ಲಿ ಸಕಲೇಶಪುರ ತಾಲೂಕಿನಿಂದ ನಿರ್ಮಿಸಲಾಗಿರುವ ನಾಲೆಯು ಹಳೇಬೀಡು ಸಮೀಪದ ಅಡಗೂರು ಐದಳ್ಳದ ಬಳಿ ಹಾದು ಹೋಗುತ್ತದೆ. ಇದಕ್ಕೆ ಸಮೀಪದಲ್ಲೇ ದ್ವಾರಸಮುದ್ರ ಕೆರೆಗೆ ನೀರು ಹರಿದು ಬರುವ ಕಾಗೆದಳ್ಳವೂ ಇದೆ. ಐದಳ್ಳದ ಬಳಿ ನಾಲೆ ಕಾಮಗಾರಿ ಕೆಲ ಕಾರಣಗಳಿಂದ ಸ್ಥಗಿತಗೊಂಡಿರುವುದರಿಂದ ಎತ್ತಿನಹೊಳೆ ನಾಲೆಯಲ್ಲಿ ಗುಡ್ಡಗಳಿಂದ ಹರಿದು ಬರುವ ನೀರು ಶೇಖರಣೆಯಾಗುತ್ತಿದೆ. ಒರತೆ ಹಿಮ್ಮುಖವಾಗಿ ಒತ್ತುವ ಕಾರಣ ನೀರನ್ನು ಕಾಗೆದಳ್ಳಕ್ಕೆ ಬಿಡಲಾಗಿದೆ. ಹೀಗಾಗಿ ದ್ವಾರಸಮುದ್ರ ಕೆರೆಗೆ ಯಥೇಚ್ಛವಾಗಿ ನೀರು ಹರಿದು ಬರುತ್ತಿದ್ದು, ಇದು ಮುಂದೆ ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಗ್ರಾಮದ ಕೆರೆಯನ್ನು ಸೇರುತ್ತದೆ. ಅಲ್ಲಿಂದ ವೇದಾವತಿ, ಮಾರಿಕಣಿವೆ ಮೂಲಕ ವಾಣಿವಿಲಾಸ ಸಾಗರವನ್ನು ಸೇರಿ ಕೃಷ್ಣಾ ಜಲಾನಯನ ಪಾತ್ರವನ್ನು ತಲುಪುತ್ತದೆ. ಹಳೇಬೀಡು ಕೆರೆಯು ತುಂಬುವುದರಿಂದ ಬಯಲು ಸೀಮೆಯ ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ಅನುಕೂಲವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net