

ಹಳೇಬೀಡು: ಏರಿ ದುರಸ್ತಿ ಕಾರಣ ಮುಂದಿಟ್ಟುಕೊಂಡು ಹದಿನೈದು ವರ್ಷಗಳ ನಂತರ ಭರ್ತಿಯಾಗಿರುವ ಪಟ್ಟಣದ ದ್ವಾರಸಮುದ್ರ ಕೆರೆ ಕೋಡಿಯ ಒಂದು ಭಾಗವನ್ನು ಒಡೆದ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದ್ದು, ಹೊಯ್ಸಳ ವೃತ್ತದಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.
ಒಡೆದಿರುವ ಕೋಡಿ ಭಾಗವನ್ನು ಮರಳು ಚೀಲ ಹಾಗೂ ಕಲ್ಲುಗಳನ್ನು ಬಳಸಿ ಮುಚ್ಚಿರುವ ಜನರು, ಶಾಸಕ ಕೆ.ಎಸ್.ಲಿಂಗೇಶ್ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಧರಣಿ ಕುಳಿತರು.
ಸ್ಥಳಕ್ಕೆ ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಭೇಟಿ ನೀಡಿ ಕೋಡಿ ಒಡೆದ ಸ್ಥಳ ವೀಕ್ಷಿಸಿ ಅಧಿಕಾರಿಗಳ ಕ್ರಮವನ್ನು ಖಂಡಿಸಿದರು. ಭಾನುವಾರ ಏರಿ ದುರಸ್ತಿ ಬಗ್ಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಏಕಾಏಕಿ ಈಗ ಕೋಡಿ ಒಡೆದು ನೀರು ನಷ್ಟ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳು ಕೆರೆ ಏರಿ ದುರಸ್ತಿಗೆ ಒಂದು ಕೊಡ ನೀರನ್ನೂ ಹಾಳು ಮಾಡದೇ ಕಾಮಗಾರಿ ನಡೆಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಈಗ ಏರಿಯನ್ನೇ ಒಡೆದು ಒಂದೂವರೆ ದಶಕದ ನಂತರ ತುಂಬಿರುವ ಕೆರೆಯ ನೀರನ್ನು ಪೋಲು ಮಾಡಿದ್ದಾರೆ. ಇದರಿಂದ ಈ ಭಾಗದಲ್ಲಿ ರೈತರು, ಪರಿಸರಕ್ಕೆ ಆಗುವ ಹಾನಿಗೆ ಯಾರು ಹೊಣೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ನಟೇಶ್, ಡಿವೈಎಸ್‌ಪಿ ನಾಗೇಶ್, ಸಿಪಿಐ ಸಿದ್ದರಾಮೇಶ್ವರ ಅವರು ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಆಗಮಿಸಿ ಸ್ಥಳಿಯರೊಂದಿಗೆ ಚರ್ಚಿಸಲಿದ್ದಾರೆ.