ದ್ವಂದ್ವ ನಿಲುವು ತಳೆದಿರುವ ಪ್ರತಿಪಕ್ಷಗಳು: ಸಾಮಾಜಿಕ ಹೋರಾಟಗಾರ ಡಾ.ಎಚ್.ವಿ.ವಾಸು ಟೀಕೆ

12
Published on

ಮೈಸೂರು: ಬಿಟ್ಟಿ ಯೋಜನೆಗಳಿಂದ ರಾಜ್ಯ ದಿವಾಳಿ ಆಗುತ್ತದೆ ಎಂದು ಟೀಕಿಸುವ ಪ್ರತಿಪಕ್ಷಗಳು ಮತ್ತೊಂದು ಕಡೆ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸುತ್ತಿರುವುದು ದ್ವಂದ್ವ ನಿಲುವಿಗೆ ಸಾಕ್ಷಿ ಎಂದು ಸಾಮಾಜಿಕ ಹೋರಾಟಗಾರ ಡಾ.ಎಚ್.ವಿ ವಾಸು ಅಭಿಪ್ರಾಯಪಟ್ಟರು.
ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಹಾಗೂ ಜನಮನ ಪ್ರತಿಷ್ಠಾನದಿಂದ ಭಾನುವಾರ ಆಯೋಜಿಸಿದ್ದ ‘ಸರ್ಕಾರದ ಉಚಿತ ಸವಲತ್ತುಗಳು- ಒಂದು ಅವಲೋಕನ’ ವಿಚಾರ ಸಂಕಿರಣದಲ್ಲಿ ಅವರು ಆರ್ಥಿಕ ಆಯಾಮ ಕುರಿತು ಮಾತನಾಡಿದರು.
ಬಡ ವರ್ಗದ ಜನರಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಆರ್ಥಿಕ ದಿವಾಳಿಯಾಗುತ್ತದೆ, ಜನರು ಸೋಮಾರಿಗಳಾಗುತ್ತಾರೆ ಎಂದು ಹೇಳುವವರೇ ಹಿಂದಿನಿಂದಲೂ ಸರ್ಕಾರದಿಂದ ಹತ್ತು ಹಲವು ಬಿಟ್ಟಿ ಭಾಗ್ಯಗಳನ್ನು ಪಡೆದುಕೊಂಡು ದೊಡ್ಡ ಸಂಪತ್ತಿನ ಸಾಮ್ರಾಜ್ಯವನ್ನೇ ನಿರ್ಮಿಸಿಕೊಂಡಿದ್ದಾರೆ ಎಂದು ಟೀಕಿಸಿದರು.
ಒಂದು ಕಡೆ ಬಡವರಿಗೆ ಯೋಜನೆಗಳನ್ನು ನೀಡಿದರೆ ಆರ್ಥಿಕ ದಿವಾಳಿ ಆಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಹಲವಾರು ವರ್ಷಗಳಿಂದ ಕೋಟ್ಯಂತರ ರೂ. ತೆರಿಗೆ ವಿನಾಯಿತಿ ಪಡೆಯುತ್ತಿರುವ ಅಂಬಾನಿ, ಅದಾನಿ ಸೇರಿದಂತೆ ಅನೇಕ ಬಂಡವಾಳ ಶಾಹಿಗಳೇ ಬಿಟ್ಟಿ ಸವಲತ್ತುಗಳ ನಿಜವಾದ ಫಲಾನುಭವಿಗಳು ಎಂದರು.
ಆಡಳಿತ ಪಕ್ಷದ ಕಾರ್ಯವೈಖರಿ ಟೀಕಿಸುವ ಹಕ್ಕು ವಿರೋಧ ಪಕ್ಷಗಳಿಗಿದೆ. ಆದರೆ ತಾವು ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರಗಳಿಗೆ ಸೂಕ್ತ ದಾಖಲೆ ಇರಬೇಕು. ಇಂತಹ ಯೋಜನೆಗಳಿಂದ ರಾಜ್ಯ ಯಾವ ರೀತಿ ದಿವಾಳಿಯಾಗುತ್ತದೆ ಎಂದು ವೈಜ್ಞಾನಿಕ ಕಾರಣಗಳನ್ನು ಸಾಬೀತುಪಡಿಸಲಿ ಎಂದು ಹೇಳಿದರು.
ಉಚಿತ ಯೋಜನೆ ನೀಡುವುದರಲ್ಲಿ ಅಗ್ರಸ್ಥಾನದಲ್ಲಿರುವ ತಮಿಳುನಾಡಿನಲ್ಲಿ ಆಂತರಿಕ ಉತ್ಪನ್ನ ಶೇ.20ರಷ್ಟು ಹೆಚ್ಚಳವಾಗಿದೆ. ಆಂಧ್ರಪ್ರದೇಶದಲ್ಲಿಯೂ ಆಂತರಿಕ ಉತ್ಪನ್ನ ಏರಿಕೆ ಅಗಿದೆ. ಬಡವರ ಕೈಗೂ ಹಣ ದೊರೆತು ಕೊಳ್ಳುವ ಶಕ್ತಿ ಬಂದಿದೆ. ಇದರಿಂದ ದೇಶದ ಆದಾಯವೂ ಹೆಚ್ಚಾಗುತ್ತದೆ ಎಂದು ಹೇಳಿದರು.
ಸಾಮಾಜಿಕ ಆಯಾಮ ಕುರಿತು ವಕೀಲೆ ಸುಮನಾ ಮಾತನಾಡಿ, ಮಹಿಳೆಯರಿಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು ಬಿಟ್ಟಿ ಭಾಗ್ಯಗಳಲ್ಲ. ನಮಗೆ ನ್ಯಾಯಯುತವಾಗಿ ಸಿಗಬೇಕಾದ ಹಕ್ಕುಗಳು. ಬಂಡವಾಳಶಾಹಿಗಳ ಲಕ್ಷಾಂತರ ಕೋಟಿ ತೆರಿಗೆ ಮನ್ನಾದಿಂದ ದೇಶ ದಿವಾಳಿಯಾಗುವುದಿಲ್ಲವೆಂದಾದರೆ, ಬಡವರಿಗೆ ನೀಡುವ ಉಚಿತ ಯೋಜನೆಗಳಿಂದ ದಿವಾಳಿಯಾಗುತ್ತದೆ ಎಂಬುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಯೋಜನೆಯ ಫಲಾನುಭವಿ ನಂಜನಗೂಡಿನ ವಸಂತಕುಮಾರಿ ಹರತಲೆ ಮಾತನಾಡಿ, ನಮ್ಮ ಹೊಲದಲ್ಲಿ ಭತ್ತ ಬೆಳೆದರೂ ನಮಗೆ ಅನ್ನ ಸಿಗುತ್ತಿರಲಿಲ್ಲ. ಬಂದ ಆದಾಯವೆಲ್ಲವೂ ಸಾಲ ತೀರಿಸಲು ಆಗುತ್ತಿತ್ತು. ಹಬ್ಬದ ದಿನಗಳಲ್ಲಿಯೂ ಜೋಳದ ಮುದ್ದೆಯನ್ನೇ ತಿನ್ನಬೇಕಿತ್ತು. ಇಂತಹ ಸಂದಭರ್ದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯದಿಂದ ಅನ್ನ ತಿನ್ನುವಂತಾಯಿತು. ಈಗಿನ ಯೋಜನೆಗಳು ಬಡ ಮಹಿಳೆಯರು ತಕ್ಕ ಮಟ್ಟಿಗೆ ನೆಮ್ಮದಿಯ ಬದುಕು ಸಾಗಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಪ್ರಗತಿಪರ ಚಿಂತಕ ಪ್ರೊ.ಪುರುಷೋತ್ತಮ ಬಿಳಿಮಲೆ, ಸಾಹಿತಿ ಡಾ.ಹಿ.ಶಿ.ರಾಮಚಂದ್ರೇಗೌಡ, ಜನಮನ ಪ್ರತಿಷ್ಠಾನದ ಅಧ್ಯಕ್ಷ ಲಕ್ಷ್ಮಣ್ ಕೊಡಸೆ, ರಂಗಾಯಣದ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ, ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು, ಸಾಹಿತ್ಯ ಕಲಾಕೂಟದ ಚಂದ್ರಶೇಖರ್, ಯೋಗೀಶ್ ಉಪ್ಪಾರ್, ಎನ್.ಆರ್.ನಾಗೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net