ದ್ರೌಪದಿ ಮುರ್ಮು ಆಯ್ಕೆ, ದಾವಣಗೆರೆ ಜಿಲ್ಲಾ ಬಿಜೆಪಿ ವಿಜಯೋತ್ಸವ

Published on

ದಾವಣಗೆರೆ : ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಅಭ್ಯರ್ಥಿ ದ್ರೌಪದಿ ಮುರ್ಮು ಆಯ್ಕೆ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ಗುರುವಾರ ವಿಜಯೋತ್ಸವ ಆಚರಿಸಲಾಯಿತು.
ಪಕ್ಷದ ಕಚೇರಿಯಿಂದ ಜಯದೇವ ವೃತ್ತಕ್ಕೆ ಆಗಮಿಸಿದ ಕಾರ್ಯಕರ್ತರು, ಮುಖಂಡರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜಯಘೋಷಗಳು ಮೊಳಗಿದವು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ. ವೀರೇಶ ಹನಗವಾಡಿ ಮಾತನಾಡಿ, ಬುಡಕಟ್ಟು ಜನಾಂಗದ ಮಹಿಳೆ ದೇಶದ ಉನ್ನತ ಸ್ಥಾನಕ್ಕೆ ಆಯ್ಕೆ ಆಗಿರುವುದು ಐತಿಹಾಸಿಕವಾಗಿದ್ದು ಹಿಂದುಳಿದ ವರ್ಗದವರು ಖುಷಿಪಡುವ, ಹೆಮ್ಮೆಯ ಸಂದರ್ಭವಾಗಿದೆ ಎಂದು ಹೇಳಿದರು.
ಈ ಹಿಂದೆ ರಾಷ್ಟ್ರಪತಿ ಸ್ಥಾನಕ್ಕೆ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಆಯ್ಕೆ ಮಾಡುವ ಮೂಲಕ ಪಕ್ಷವು ಎಲ್ಲ ವರ್ಗಗಳ ಜನರ ಪರವಾಗಿದೆ ಎಂಬುದನ್ನು ತೋರಿಸಿಕೊಟ್ಟಿತ್ತು. ಈಗ ದ್ರೌಪದಿ ಮುರ್ಮು ಆಯ್ಕೆಯೊಂದಿಗೆ ಅದು ಮತ್ತೊಮ್ಮೆ ಸಾಬೀತಾಗಿದೆ ಎಂದರು.
ಪಕ್ಷವು ಸಾಧಕರನ್ನು ಗುರುತಿಸಿ ಉನ್ನತ ಜವಾಬ್ದಾರಿಗಳನ್ನು ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿದರು. ದೇಶವು ಎಲ್ಲ ಕ್ಷೇತ್ರಗಳಲ್ಲಿ ಪೈಪೋಟಿ ನೀಡುತ್ತಿದ್ದು ಇಡೀ ಜಗತ್ತು ಭಾರತದ ಕಡೆಗೆ ನೋಡುವಂತಾಗಿದೆ ಎಂದು ಹೇಳಿದರು.
ಮೇಯರ್ ಆರ್. ಜಯಮ್ಮ, ದೂಡಾ ಅಧ್ಯಕ್ಷ ಕೆ.ಎಂ. ಸುರೇಶ್, ಮಹಾನಗರ ಪಾಲಿಕೆ ಸದಸ್ಯರಾದ ಪ್ರಸನ್ನಕುಮಾರ್, ಸೋಗಿ ಶಾಂತಕುಮಾರ್, ಶಿವಪ್ರಕಾಶ್, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಉಪಾಧ್ಯಕ್ಷ ಮಂಜಾ ನಾಯ್ಕ, ಮುಖಂಡರಾದ ಮಂಜುಳ ಮಹೇಶ್, ಪುಷ್ಪ ವಾಲಿ, ರೂಪಾ, ಶಿವನಗೌಡ ಪಾಟೀಲ್, ಎಚ್.ಪಿ. ವಿಶ್ವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net