

ದೊಡ್ಡಬಳ್ಳಾಪುರ: ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಲ್ಲಿ ಆರೋಗ್ಯ, ವಸತಿ, ಕಾನೂನು ಮತ್ತು ಪೊಲೀಸ್ ನೆರವು, ಆಪ್ತ ಸಮಾಲೋಚನೆ ನಡೆಸುವ ಸಖಿ ಒನ್ ಸ್ಟಾಪ್ ಸೆಂಟರ್ 30 ಜಿಲ್ಲೆಗಳಲ್ಲೂ ಯಶಸ್ವಿಯಾಗಿ ಕಾರ‌್ಯನಿರ್ವಹಿಸುತ್ತಿವೆ ಎಂದು ಸಚಿವ ಹಾಲಪ್ಪ ಬಸಪ್ಪ ಆಚಾರ್ ತಿಳಿಸಿದರು.
ದೊಡ್ಡಬಳ್ಳಾಪುರದಲ್ಲಿ ನೂತನ ಸಖಿ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, 2021-22ನೇ ಸಾಲಿನಲ್ಲಿ ರಾಜ್ಯಾದ್ಯಂತ 2,742 ಮಂದಿ ಮಹಿಳೆ ಹಾಗೂ ಹೆಣ್ಣು ಮಕ್ಕಳಿಗೆ ಸಖಿ ಒನ್ ಸ್ಟಾಪ್ ಸೆಂಟರ್ ಸೌಲಭ್ಯ ಒದಗಿಸಿದೆ. 30 ಜಿಲ್ಲೆಗಳ ಪೈಕಿ 9 ಜಿಲ್ಲೆಗಳಲ್ಲಿ ಮಾತ್ರ ಸ್ವಂತ ಕಟ್ಟಡದಲ್ಲಿ ಕಾರ‌್ಯ ನಿರ್ವಹಿಸುತ್ತಿದ್ದು, 21 ಜಿಲ್ಲೆಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ‌್ಯ ನಿರ್ವಹಿಸುತ್ತಿವೆ ಎಂದರು.
ದೊಡ್ಡಬಳ್ಳಾಪುರದ ಸಖಿ ಕಟ್ಟಡವನ್ನು 48.68 ಲಕ್ಷ ರೂ. ಡಿಎಂಎಫ್ ನಿಧಿ, ಜಿಲ್ಲಾ ಖನಿಜ ಪ್ರತಿಷ್ಠಾನದಿಂದ 9.60 ಲಕ್ಷ ರೂ. ಸೇರಿ 58.28 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಿರುವುದು ಸ್ವಾಗತಾರ್ಹ ಎಂದರು.
ಕೇಂದ್ರ ಸರ್ಕಾರದ ನೆರವು: ಈ ಯೋಜನೆ ಶೇ.100 ಕೇಂದ್ರ ಸರ್ಕಾರದ ಅನುದಾನದಲ್ಲಿ ನಡೆಯುತ್ತಿದ್ದು, ಒಂದು ಕೇಂದ್ರಕ್ಕೆ ತಿಂಗಳಿಗೆ 2 ಲಕ್ಷ ರೂ. ಗಳನ್ನು ಕೇಂದ್ರಕ್ಕೆ ನೀಡುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ 2,747 ಪ್ರಕರಣಗಳಿಗೆ ಇದರ ಸೌಲಭ್ಯ ದೊರೆತಿದೆ. ಇಲ್ಲಿ ಮಹಿಳೆಯರಿಗೆ ತುರ್ತು ಆರೋಗ್ಯ, ಕಾನೂನು ಸೇವೆಗೂ ಅವಕಾಶ ಮಾಡಿಕೊಟ್ಟಿದೆ ಎಂದು ಸಚಿವರು ತಿಳಿಸಿದರು.
ಅತ್ಯಾಚಾರ ಪ್ರಕರಣ, ಲೈಂಗಿಕ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ, ಆಸಿಡ್ ದಾಳಿ, ಬಾಲ್ಯ ವಿವಾಹ, ವರದಕ್ಷಿಣೆ ಕಿರುಕುಳ ಇನ್ನಿತರ ಪ್ರಕರಣಗಳಿಗೆ ಸಖಿ ಕೇಂದ್ರದಲ್ಲಿ ಪರಿಹಾರ ಸಿಗಲಿದೆ ಎಂದು ತಿಳಿಸಿದರು.
139 ಪ್ರಕರಣಗಳು ದಾಖಲು: 2019ನೇ ಸಾಲಿನಿಂದ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಸಖಿ ಕೇಂದ್ರ ಕಾರ‌್ಯನಿರ್ವಹಿಸುತ್ತಿತ್ತು. ಈಗ ಹೊಸ ಕಟ್ಟಡದಲ್ಲಿ ಕಾರ‌್ಯ ನಿರ್ವಹಸಲಿದೆ. ಜಿಲ್ಲೆಯಲ್ಲಿ 90 ಕೌಟುಂಬಿಕ ದೌರ್ಜನ್ಯ ಪ್ರಕರಣ, 12 ಲೈಂಗಿಕ ದೌರ್ಜನ್ಯ ಪ್ರಕರಣ, ಮಕ್ಕಳ ಮೇಲಿನ ದೌರ್ಜನ್ಯ 14, 2 ಬಾಲ್ಯ ವಿವಾಹಗಳು, ಕಾಣಿಯಾದ 3 ಸೇರಿ ಒಟ್ಟು 139 ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜು ತಿಳಿಸಿದರು.