

ಹಾಸನ: ದೌರ್ಜನ್ಯವನ್ನು ಎದುರಿಸುವ ಮತ್ತು ವಿರೋಧಿಸುವ ಧೈರ್ಯವನ್ನು ಇಂದಿನ ಹೆಣ್ಣು ಮಕ್ಕಳು ಕಲಿಯಬೇಕು ಎಂದು ರಾಜ್ಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘದ ಅಧ್ಯಕ್ಷೆ ಡಾ. ಭಾರತಿ ರಾಜಶೇಖರ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ ಮಿನಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಿಳೆ ಮೇಲಿನ ದೌರ್ಜನ್ಯ ಕುರಿತಾದ ಒಂದು ಅವಲೋಕನ ಮತ್ತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೌರ್ಜನ್ಯದಲ್ಲಿ ಗಂಡು-ಹೆಣ್ಣು ಎಂಬ ಭೇದವಿಲ್ಲ. ದೌರ್ಜನ್ಯವನ್ನು ತಡೆಗಟ್ಟುವಲ್ಲಿ ಬೆಂಬಲವಾಗಿ ನಿಲ್ಲಬೇಕಾದ ಕುಟುಂಬವೇ ಇಂದು ದೌರ್ಜನ್ಯಕ್ಕೆ ದಾರಿ ಮಾಡಿಕೊಡುತ್ತಿರುವುದು ವಿಷಾದನೀಯ. ಕೌಟುಂಬಿಕ ದೌರ್ಜನ್ಯವನ್ನು ತಡೆಗಟ್ಟುವುದೇ ಸವಾಲಾಗಿದೆ ಎಂದರು.
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ಸಾವಿತ್ರಿ ಮಾತನಾಡಿ, ದೈಹಿಕ ಸಮಸ್ಯೆಗಳನ್ನು ಹೊತ್ತು ನಮ್ಮಲ್ಲಿಗೆ ಬರುವ ಪ್ರತಿ ಹೆಣ್ಣಿನ ಹಿಂದೆ ಒಂದಲ್ಲ ಒಂದು ದೌರ್ಜನ್ಯದ ಕಥೆ ಇದ್ದೇ ಇರುತ್ತದೆ. ಆ ಮೂಲಕ ಹೆಣ್ಣನ್ನು ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಇಂದಿನ ಸಮಾಜ ಸಮಸ್ಯೆಗೆ ತುತ್ತಾದ ಹೆಣ್ಣನ್ನು ನೋಡುವ, ಬಿಂಬಿಸುವ ರೀತಿಯಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದರಿಂದ ದೌರ್ಜನ್ಯವನ್ನು ತಡೆಗಟ್ಟುವುದು ಸಾಧ್ಯವಿದೆ ಎಂದು ಹೇಳಿದರು.
ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘದ ಅಧ್ಯಕ್ಷೆ ಡಾ. ಗಿರಿಜಾ ಮಾತನಾಡಿ, ಹೆಣ್ಣು ಮಕ್ಕಳು ತಮ್ಮ ಮೇಲಿನ ದೌರ್ಜನ್ಯವನ್ನು ವಿರೋಧಿಸುವ ದಾಟಿಯನ್ನು ರೂಢಿಸಿಕೊಳ್ಳಬೇಕು. ಸೇ ನೋ ಅನ್ನುವುದನ್ನು ಕಲಿತಾಗಲೆ ನಮ್ಮನ್ನು ನಾವು ಗಟ್ಟಿಗೊಳಿಸಿಕೊಳ್ಳಲು ಸಾಧ್ಯ. ದೌರ್ಜನ್ಯದ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ವಾತಾವರಣವನ್ನು ಸೃಷ್ಟಿಸಿಕೊಳ್ಳಬೇಕು ಎಂದು ತಿಳಿಸಿದರು.
ಡಾ. ಪಿ.ಆರ್. ಶಾಂತಾ ಮಾತನಾಡಿ, ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗೂ ಬದುಕುವ ಹಕ್ಕಿದೆ. ಯಾವುದೇ ಲಿಂಗ ರಾಷ್ಟ್ರೀಯತೆ, ಜನಾಂಗ, ಧರ್ಮ ಇವುಗಳನ್ನು ಲೆಕ್ಕಿಸದೆ ಎಲ್ಲರೂ ಸಮಾನರು. ಪುರಾತನ ಕಾಲದಿಂದಲೂ ಮಹಿಳೆ ಸಾಕಷ್ಟು ಸಾಧನೆಗಳು ಮಾಡಿಕೊಂಡು ಬಂದಿದ್ದಾರೆ. ಆದರೂ ಮಹಿಳೆಯನ್ನು ದ್ವಿತೀಯ ದರ್ಜೆಯ ಪ್ರಜೆಯಾಗಿ ಕಾಣುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಕೇವಲ ಹೆಣ್ಣನ್ನು ಸಹಾನುಭೂತಿ, ಅನುಕಂಪಗಳ ಆಧಾರದ ಮೇಲೆ ಕಾಣಲಾಗುತ್ತಿದೆ. ಇಂದು ಎಲ್ಲ ಕ್ಷೇತ್ರಗಳಲ್ಲೂ ಹೆಣ್ಣನ್ನು ತಾತ್ಸಾರದಿಂದ ನೋಡುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಎಂ.ಬಿ. ಇರ್ಷಾದ್, ಶೈಕ್ಷಣಿಕ ಡೀನ್ ಡಿ.ಎಸ್.ರಾಜು, ಪರೀಕ್ಷಾ ನಿಯಂತ್ರಕ ಡಾ.ಕೆ.ಡಿ. ಮುರಳೀಧರ್, ಪತ್ರಾಂಕಿತ ವ್ಯವಸ್ಥಾಪಕರಾದ ಸತ್ಯಮೂರ್ತಿ, ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘದ ಕಾರ್ಯದರ್ಶಿ ಭವ್ಯಾ ಸುನೀಲ್, ಡಾ. ಹೇಮಲತಾ, ಸಹಪ್ರಾಧ್ಯಾಪಕ ಡಾ. ವಿ.ರಮೇಶ್, ಅನಿತಾ, ಎ.ವಿ.ರಶ್ಮಿ, ಕಾರ್ಯಕ್ರಮ ಸಂಚಾಲಕರಾದ ಅನುರಾಧಾ, ವಾಣಿಜ್ಯಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಸವಿತಾ ಉಪಸ್ಥಿತರಿದ್ದರು.