ದೌರ್ಜನ್ಯ ಮೆಟ್ಟುವ ಶಕ್ತಿ ಪ್ರದರ್ಶನವಾಗಲಿ-ಕವಿ ಡಾ. ದೊಡ್ಡರಂಗೇಗೌಡ ಆಶಯ

IMG-20230105-WA0055.jpg
Published on

ದಾವಣಗೆರೆ: ಕರ್ನಾಟಕದ ಮೇಲಾಗುವ ದೌರ್ಜನ್ಯಗಳನ್ನು ಹಿಮ್ಮೆಟ್ಟಿಸಲು ಕನ್ನಡಿಗರು ಶಕ್ತಿ ಪ್ರದರ್ಶನ ಮಾಡಬೇಕು. ಕನ್ನಡ ನಾಡಿನ ಒಂದಂಗುಲದ ನೆಲವನ್ನೂ ಮರಾಠಿಗರಿಗೆ ಬಿಟ್ಟು ಕೊಡದಿರುವುದು ನಮ್ಮ ಕಾರ್ಯತಂತ್ರವಾಗಬೇಕು ಎಂದು ಹಿರಿಯ ಕವಿ, 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ದೊಡ್ಡರಂಗೇಗೌಡ ಹೇಳಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಹಾವೇರಿಗೆ ತೆರಳುವ ಮಾರ್ಗಮಧ್ಯೆ ಗುರುವಾರ, ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕನ್ನಡಕ್ಕೆ, ಕನ್ನಡದ ವ್ಯಕ್ತಿತ್ವಕ್ಕೆ ಬಹಳ ದೊಡ್ಡ ಆಯಾಮವಿದೆ. ಹಳಗನ್ನಡದ, ಕಪ್ಪೆ ಆರ್ಯಭಟ ಶಾಸನದಲ್ಲಿ ಹೇಳಿದಂತೆ ಕನ್ನಡಿಗನು ಸಾಧುಗಳಿಗೆ ಸಾಧು, ಮಧುರವಾಗಿ ವ್ಯವಹರಿಸುವವರಿಗೆ ಮಧುರನೂ, ತೊಂದರೆ ಕೊಡುವವರಿಗೆ ಕಲಿಯುಗದ ಯಮನಾಗಿದ್ದಾನೆ. ಕನ್ನಡಿಗನು ಮಾಧವನೂ ಆಗಿದ್ದಾನೆ ಎಂಬ ಮಾತುಗಳು ದೌರ್ಜನ್ಯಗಳನ್ನು ಮೆಟ್ಟಿನಿಲ್ಲಲು ಬಲ ತುಂಬಲಿವೆ ಎಂದರು.

ಮಹಾಜನ್ ವರದಿ ಪ್ರಕಾರ ಬೆಳಗಾವಿ, ಕರ್ನಾಟಕಕ್ಕೆ ಸೇರಬೇಕು. ಅದು ಮುಕ್ಕಾಗಬಾರದು. ಪ್ರತಿಯೊಬ್ಬರೂ ಮಹಾಜನ್ ವರದಿ ಓದಬೇಕು.

ಕೇರಳದಲ್ಲಿ ಇತ್ತೀಚಿಗೆ ಒಂದಷ್ಟು ಕಿರುಕುಳ ಪ್ರಾರಂಭವಾಗಿವೆ. ಅಲ್ಲಿನ ಶಾಲೆಗಳಲ್ಲಿ ಕನ್ನಡದ ಅಧ್ಯಾಪಕರೇ ಇಲ್ಲ. ಕನ್ನಡ, ಕಾಗುಣಿತವನ್ನು ಕಲಿಸುವವರಿಲ್ಲ. ಇದರಿಂದ ಕನ್ನಡದ ಮಕ್ಕಳು ಸೊರಗುತ್ತಿದ್ದಾರೆ. ನಮ್ಮೆಲ್ಲರ ಎದೆಗೆ ನಾಲ್ಕಕ್ಷರ ಬಿದ್ದಿವೆ. ನಾವು ಇದರ ಬಗ್ಗೆ ಚಿಂತನೆ ಮಾಡಬೇಕು ಎಂದರು.

ಕನ್ನಡ ಧೀಮಂತ ಮತ್ತು ಮಧುರವಾದ ಭಾಷೆ, ಮಾನವೀಯ ನೆಲೆಯುಳ್ಳ ಭಾಷೆ. ನಮ್ಮಲ್ಲಿ ಇಚ್ಛಾಶಕ್ತಿ ಇದ್ದರೆ ಭೌತಶಾಸ್ತ್ರ, ರಸಾಯನಶಾಸ್ತ್ರ ಜೀವಶಾಸ್ತ್ರವನ್ನು ಕನ್ನಡದಲ್ಲಿ ಹೇಳಲು ಸಾಧ್ಯ. ವೈದ್ಯಕೀಯ ಶಾಸ್ತ್ರವನ್ನು ಕನ್ನಡದಲ್ಲಿ ಹೇಳಿದ ಮಹನೀಯರಿದ್ದಾರೆ. ಯೊಮ ವಿಜ್ಞಾನವನ್ನು ಕನ್ನಡದಲ್ಲಿ ಹೇಳಬಲ್ಲ ಬೇಕಾದಷ್ಟು ಕನ್ನಡಿಗರಿದ್ದಾರೆ.

ಸುಲಿದ ಬಾಳೆಯ ಹಣ್ಣಿನಂತೆ ಕನ್ನಡದಲ್ಲಿ ಹೇಳುವ ವಿದ್ವಾಂಸರು ನಮ್ಮಲ್ಲಿದ್ದಾರೆ. ಹಿಂಜರಿಕೆ ಬೇಡ. ಕನ್ನಡಿಗರು ಯಾವತ್ತೂ ಎದೆ ಸೆಟೆಸಿ ಮುಂದೆ ಹೋಗಬೇಕು. ಪರಂಪರಾಗತವಾದ ಪರಾಕ್ರಮ, ತೇಜಸ್ಸನ್ನು ನಾವು ಪಡೆದುಕೊಂಡಿದ್ದೇವೆ ಎಂದು ಅಭಿಮಾನಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ ಹಿರಿಯ ಸಾಹಿತಿ, ಚಿಂತಕರೂ ಆದ ಡಾ.ದೊಡ್ಡರಂಗೇಗೌಡರು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಹೇಳಿದರು.

ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಜಿ.ರುದ್ರಯ್ಯ, ಮಾಜಿ ಅಧ್ಯಕ್ಷ ಎ.ಆರ್. ಉಜ್ಜನಪ್ಪ, ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಬಿ. ದಿಳ್ಳಪ್ಪ, ರೇವಣಸಿದ್ದಪ್ಪ ಅಂಗಡಿ, ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಸಂಘಟನಾ ಕಾರ್ಯದರ್ಶಿಗಳಾದ ಸಿ.ಜಿ. ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ್, ಬಾ.ಮ. ಬಸವರಾಜಯ್ಯ, ಎಚ್.ಬಿ. ಮಂಜುನಾಥ್, ಕೆ ಬಿ ಕೊಟ್ರೇಶ್, ರುದ್ರಾಕ್ಷಿ ಬಾಯಿ, ಭೈರೇಶ್, ಎಲ್.ಜಿ. ಮಧುಕುಮಾರ್ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net