ದೌರ್ಜನ್ಯ ಪ್ರಶ್ನಿಸುವುದು ನಾಗರಿಕ ಹಕ್ಕು

19rajesh6
Published on

ಚಾಮರಾಜನಗರ: ಅನ್ಯಾಯ, ಶೋಷಣೆ, ದೌರ್ಜನ್ಯ, ತಾರತಮ್ಯ ಮಾಡುವುದು ಕಂಡು ಬಂದಲ್ಲಿ ಪ್ರಶ್ನಿಸುವುದು ನಾಗರಿಕ ಹಕ್ಕು. ಯಾವುದೇ ಅನ್ಯಾಯವಾದಾಗ ನೋವು ಅನುಭವಿಸಿದವರ ಪರ ನಿಂತು ನೆರವಿಗೆ ಬರಬೇಕು. ಶೋಷಿತರ ರಕ್ಷಣೆಗೆ ಮುಂದಾಗಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎನ್.ಮುನಿರಾಜು ತಿಳಿಸಿದರು.

ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಜನಹಿತಾಸಕ್ತಿ ಹೋರಾಟ ವೇದಿಕೆ ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಹಯೋಗದೊಂದಿಗೆ ಬುಧವಾರ ಆಯೋಜಿಸಲಾಗಿದ್ದ ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ ಕುರಿತ ವಿಚಾರ ಸಂಕಿರಣ ಹಾಗೂ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನ ಪ್ರತಿಯೊಬ್ಬರಿಗೂ ಹಕ್ಕುಗಳನ್ನು ನೀಡಿದೆ. ಹಕ್ಕುಗಳ ಉಲ್ಲಂಘನೆಯಾದಾಗ ಪ್ರಶ್ನಿಸಿ ಸಂರಕ್ಷಣೆ ಮಾಡಲು ಕಾಯ್ದೆಗಳಿ ಇವೆ. ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ 1955 ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ 1989 ಇದ್ದು ನೊಂದವರ ರಕ್ಷಣೆಗೆ ಇದೆ. ಇಂತಹ ಕಾನೂನುಗಳ ಬಗ್ಗೆ ತಿಳಿವಳಿಕೆ ನೀಡಲು ವಿಚಾರ ಸಂಕಿರಣ ಕಾರ್ಯಗಾರವನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು.

ಹಿರಿಯ ಸಾಹಿತಿ ಸೋಮಶೇಖರ ಬಿಸಲವಾಡಿ ಮಾತನಾಡಿ, ಸಂವಿಧಾನ ಮೂಲಭೂತ ಹಕ್ಕುಗಳನ್ನು ನೀಡಿದೆ. ಸಮಾನತೆಯ ಹಕ್ಕು ಪರಿಚ್ಚೇದದ ಅಡಿ ಅಸೃಶ್ಯತಾ ಪ್ರತಿಬಂಧಕ ಕಾಯ್ದೆ, ದೌರ್ಜನ್ಯ ಪ್ರತಿಬಂಧಕ ಕಾಯ್ದೆ ಅಧಿನಿಯಮಗಳನ್ನು ತರಲಾಗಿದೆ. ಸಮಾನತೆ ಸ್ವಾತಂತ್ರ ಪ್ರತಿಯೊಬ್ಬರಿಗೂ ಇದೆ. ಮೇಲು ಕೀಳು ಭಾವನೆಯಿಂದ ನೋಡುವುದು ಸಲ್ಲದು. ದಬ್ಬಾಳಿಕೆ ತಾರತಮ್ಯ ಮಾಡುವಂತಿಲ್ಲ ಎಂದರು.

ಸಂವಿಧಾನಾತ್ಮಕ ಹಕ್ಕುಗಳ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಅರಕಲವಾಡಿ ನಾಗೇಂದ್ರ ಮಾತನಾಡಿ, ಅಂಕಗಳ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣವು ಮುಖ್ಯವಾಗಿದೆ. ಸಂವಿಧಾನಾತ್ಮಕ ಹಕ್ಕು ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಬೇಕಿದೆ. ದೌರ್ಜನ್ಯ ಪ್ರತಿಬಂಧ ಕಾಯ್ದೆಗಳ ಬಗ್ಗೆ ಹೆಚ್ಚು ಅರಿವು ಹೊಂದಿದಾಗ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಲಿದೆ. ವಿದ್ಯೆಯೊಂದಿಗೆ ಪ್ರಜ್ಞಾವಂತರು ಆಗಬೇಕು. ಸಂವಿಧಾನ, ಕಾನೂನುಗಳ ಬಗ್ಗೆ ನಡೆಯುವ ಸಂವಾದ, ವಿಚಾರಣ ಸಂಕಿರಣಗಳಲ್ಲಿ ಹೆಚ್ಚು ಭಾಗವಹಿಸಿ ಜಾಗೃತರಾಗಬೇಕು ಎಂದು ತಿಳಿಸಿದರು.

ಜನಹಿತಾಸಕ್ತಿ ಹೋರಾಟ ವೇದಿಕೆ ಜಿಲ್ಲಾ ಅಧ್ಯಕ್ಷ ರಾಮಸಮುದ್ರ ಸುರೇಶ್ ಮಾತನಾಡಿದರು. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಎಚ್.ಜಿ.ಲೋಕೇಶ್, ಕಲಾವಿದರಾದ ಮಹದೇವು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ. ರಮೇಶ್, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net