ದೌರ್ಜನ್ಯ ಪ್ರಕರಣಗಳಲ್ಲಿ ಪೊಲೀಸರ ನಿರ್ಲಕ್ಷ್ಯ

28rajesh1
Published on

ಚಾಮರಾಜನಗರ: ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಎಸ್ಸಿ, ಎಸ್ಟಿ ದೌರ್ಜನ್ಯ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಲು ವಿಲವಾಗಿದ್ದು, ನಿರ್ಲಕ್ಷ್ಯ ಧೋರಣೆ ಕಂಡು ಬರುತ್ತಿದೆ ಎಂದು ಸಮುದಾಯದ ಮುಖಂಡರು ಆರೋಪಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ಮುಖಂಡರ ಕುಂದುಕೊರತೆ ಸಭೆಯಲ್ಲಿ ಕೆಲವು ಮುಖಂಡರು ಮಾತನಾಡಿ, ಪೊಲೀಸರು ಎಸ್ಟಿ, ಎಸ್ಟಿ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯ ನಿವಾಸಿ ಎಸ್.ಮಂಜುನಾಥ್ ಎಂಬುವವರು ಮಾತನಾಡಿ, ಕಳೆದ 2 ವರ್ಷಗಳಿಂದಲೂ ಮೇಲ್ವರ್ಗದ ಓರ್ವ ಯುವತಿಯನ್ನು ನಾನು ಪ್ರೇಮಿಸುತ್ತಿದ್ದೆನು. ಈ ವರ್ಷ ೆ.25 ರಂದು ಇಬ್ಬರು ಒಪ್ಪಿಕೊಂಡು ವಿವಾಹ ನೋಂದಣಿ ಮಾಡಿಕೊಂಡಿದ್ದೇವು. ಆದರೆ ಈಗ ಯುವತಿ ಮನೆಯವರು ನನ್ನ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಯುವತಿ ಮನೆಯವರ ಮೇಲೆ ದೌರ್ಜನ್ಯ ಕಾಯ್ದೆ ದಾಖಲಿಸಿ, ಹಲವಾರು ಸಾಕ್ಷಿಗಳನ್ನು ಒದಗಿಸಿದ್ದರೂ ಇಂದಿಗೂ ಆರೋಪಿಗಳನ್ನು ಬಂಧಿಸಿಲ್ಲ. ಮೈಸೂರಿನ ನ್ಯಾಯಾಲಯಕ್ಕೆ ಹಾಜರು ಆಗುವಾಗ ಯುವತಿ ಮನೆಯವರು ನನ್ನನ್ನು ಎದುರಿಸುತ್ತಾರೆ. ಪ್ರಾಣ ಬೆದರಿಕೆಯನ್ನು ಹಾಕುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಎಸ್ಪಿ ಡಾ.ಬಿ.ಟಿ.ಕವಿತಾ ಪ್ರತಿಕ್ರಿಯಿಸಿ, ಪ್ರಸ್ತುತ ನೀವು ಮೈಸೂರಿನ ನ್ಯಾಯಾಲಯದ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆಗೆ ದೂರು ದಾಖಲಿಸಿ. ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಸಾಕ್ಷ್ಯಗಳನ್ನು ಒದಗಿಸಿದ ಬಳಿಕ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದರು.

ಗುಂಡ್ಲುಪೇಟೆ ಭೀಮನಬಿಡು ಗ್ರಾಮದ ನಾಗಮಲ್ಲು ಮಾತನಾಡಿ, ಹಂಗಳ ಗ್ರಾಮದಲ್ಲಿ ಮೇಲ್ವರ್ಗದವರು ಮಾಡಿದ ಗಲಾಟೆಗೆ ಸಂಬಂಧಿಸಿದಂತೆ ದೌರ್ಜನ್ಯ ಪ್ರಕರಣ ದಾಖಲಾಗಿ 8 ದಿನಗಳು ಕಳೆದಿದ್ದರೂ ಇಂದಿಗೂ ಆ ಕುರಿತು ಕ್ರಮವಹಿಸಿಲ್ಲ. ಅವರಿಗೆ ಪರಿಹಾರವನ್ನು ಕೊಡಿಸುವ ಪ್ರಯತ್ನ ಮಾಡಿಲ್ಲ. ಭೀಮನಬೀಡು ಗ್ರಾಮದಲ್ಲೂ 3 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದರೂ, ಇಂದಿಗೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ದೂರಿದರು.

ಎಸ್ಪಿ ಡಾ.ಬಿ.ಟಿ.ಕವಿತಾ ಪ್ರತಿಕ್ರಿಯಿಸಿ, ಈ ಸಂಬಂಧ ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸುವ ಕೆಲಸ ಮಾಡಲಾಗುತ್ತದೆ. ಸಮಾಜ ಕಲ್ಯಾಣ ಇಲಾಖೆಗೆ ಪರಿಹಾರ ನೀಡಿಲು ಸೂಚನೆ ನೀಡಿದ್ದೂ, ಶೀಘ್ರದಲ್ಲೇ ಪರಿಹಾರ ದೊರೆಯಲಿದೆ ಎಂದು ಹೇಳಿದರು. ಸಭೆಯಲ್ಲಿ ಡಿವೈಎಸ್ಪಿ ಸ್ನೇಹಾರಾಜ್, ಧರ್ಮೆಂದ್ರ ಹಾಗೂ ಸಮುದಾಯದ ಮುಖಂಡರು ಹಾಜರಿದ್ದರು.

ಪೋಕ್ಸೋ ಆರೋಪಿಯನ್ನೂ ಬಂಧಿಸಿಲ್ಲ:

ರಾಮಸಮುದ್ರ ಬಡಾವಣೆಯ ನಿವಾಸಿ ಪರಶಿವಯ್ಯ ಮಾತನಾಡಿ, ಬಡಾವಣೆಯ ಅಪ್ರಾಪ್ತ ಬಾಲಕಿಯ ಮೇಲೆ ವ್ಯಕ್ತಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿ, ಯುವತಿ ಗರ್ಭಿಣಿಯಾಗಿದ್ದಳು. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿ 3 ತಿಂಗಳು ಕಳೆದರೂ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲ. ಆರೋಪಿಯ ಕಡೆಯವರು ಪ್ರಬಲರಾಗಿರುವ ಕಾರಣಕ್ಕೆ ಇಂತಹ ಧೋರಣೆ ಅನುಸರಿಸಲಾಗುತ್ತಿದೆಯೇ ಎಂದು ದೂರಿದರು. ಪಟ್ಟಣ ಠಾಣೆಯ ಇನ್ಸ್‌ಪೆಕ್ಟರ್ ಪ್ರತಿಕ್ರಿಯಿಸಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಲೆಮರೆಸಿಕೊಂಡಿರಬಹುದಾದ ಜಾಗವನ್ನು ಪತ್ತೆ ಹಚ್ಚಲಾಗುತ್ತಿದೆ ಎಂದರು. ಈ ವೇಳೆ ಎಸ್ಪಿ ಡಾ.ಬಿ.ಟಿ.ಕವಿತಾ ಮಾತನಾಡಿ ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಬೇಕು ಎಂದು ಇನ್ಸ್‌ಪೆಕ್ಟರ್ ಅವರಿಗೆ ಸೂಚನೆ ನೀಡಿದರು.

ಖಾಸಗಿ ೈನಾನ್ಸ್ ಮೇಲೆ ಕ್ರಮಕ್ಕೆ ಆಗ್ರಹ:

ಮುಖಂಡ ಭಾನುಪ್ರಕಾಶ್ ಮಾತನಾಡಿ, ಇತ್ತೀಚೆಗೆ ಅಮಚವಾಡಿ ಗ್ರಾಮದಲ್ಲಿ ನಡೆದ ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ನಾಗವಳ್ಳಿ ಗ್ರಾಮದ ನಟರಾಜ್ ಎಂಬುವವರು ಮೃತಪಟ್ಟದ್ದರು. ಈತ ಖಾಸಗಿ ೈನಾನ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಅಪಘಾತವಾದ ನಂತರ ಮೃತ ಯುವಕ ನಮ್ಮಲ್ಲಿ ಕೆಲಸವನ್ನೇ ಮಾಡುತ್ತಿರಲಿಲ್ಲ ಎಂದು ೈನಾನ್ಸ್ ಕಂಪನಿಯವರು ಹೇಳುತ್ತಿದ್ದಾರೆ. ಆಗಾಗಿ ೈನಾನ್ಸ್ ಕಂಪನಿಯ ಮೇಲೆ ಕ್ರಮವಹಿಸಿ ಮೃತ ಯುವಕನಿಗೆ ಸೂಕ್ತ ಪರಿಹಾರವನ್ನು ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

ಹಲವು ಸಮಸ್ಯೆಗಳ ಅನಾವರಣ:

ಮುಖಂಡ ಸಿ.ಕೆ.ಮಂಜುನಾಥ್ ಮಾತನಾಡಿ, ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮವಹಿಸಬೇಕು. ಚಾ.ನಗರ ತಾಲೂಕಿನ ಭೋಗಾಪುರ ಗ್ರಾಮದಲ್ಲಿ ಓರ್ವ ಮಹಿಳೆಗೆ ಸ್ವಜಾತಿಯಲ್ಲೇ ಬಹಿಷ್ಕಾರ ಹಾಕಿದ್ದು, ಈ ಕುರಿತು ಪೊಲೀಸರು ಮಹಿಳೆಗೆ ಅಗತ್ಯ ರಕ್ಷಣೆಯನ್ನು ನೀಡಬೇಕು ಎಂದು ಒತ್ತಾಯಿಸಿದರು. ಮಹೇಶ್ ಎಂಬುವವರು ಮಾತನಾಡಿ, ಬದನಗುಪ್ಪೆ ಗ್ರಾಮದಲ್ಲಿ ಅಂಬೇಡ್ಕರ್ ಬೋರ್ಡ್ ಬಳಿ ಸ್ವಚ್ಛಗೊಳಿಸಲು ಅನುವುಮಾಡಿಕೊಡಬೇಕು ಎಂದರು. ಕಾಗಲವಾಡಿ ರುದ್ರೇಶ್ ಗುಂಡಣ್ಣ ಮಾತನಾಡಿ, ಜೀತಮುಕ್ತರಿಗೆ ನೀಡಿರುವ ಸುಮಾರು 35.10 ಎಕರೆ ಜಮೀನಿನಲ್ಲಿ ಅನ್ಯವ್ಯಕ್ತಿಗಳು ಪ್ರವೇಶಿಸಿದ್ದಾರೆ. ಈ ಪ್ರದೇಶದ ಗಡಿಗುರುತಿಸಿ ಜಮೀನು ಬಿಡಿಸಿಕೊಡಬೇಕು ಎಂದರು. ವಾಸು ಹೊಂರಬಾಳು ಮಾತನಾಡಿ, ಚನ್ನಪ್ಪನಪುರ ಗ್ರಾಮದಲ್ಲಿ ಅಗ್ರಿಗೋಲ್ಡ್ ಕಂಪನಿಯವರು ಸುಮಾರ 10 ಎಕರೆ ಜಮೀನು ಖರೀದಿ ಮಾಡಿದ್ದರು. ಈಗ ಎಸ್ಸಿಗಳ 10-15 ಜಮೀನನ್ನು ಒತ್ತುವರಿ ಮಾಡಿಕೊಳ್ಳಲು ಯತ್ನಿಸಿದ್ದು, ಇದನ್ನು ತಡೆಹಿಡಿಯಬೇಕು ಎಂದು ಮನವಿ ಮಾಡಿದರು.

ಈ ವರ್ಷದಲ್ಲಿ 36 ದೌರ್ಜನ್ಯ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ. ಅದರಲ್ಲಿ 26 ಪ್ರಕರಣಗಳು ನ್ಯಾಯಾಲಯಗಳಲ್ಲಿ ಇತ್ಯರ್ಥಗೊಂಡಿದ್ದು, ಉಳಿದ ಪ್ರಕರಣಗಳು ಚಾಲ್ತಿಯಲ್ಲಿವೆ. ಎಸ್ಟಿ, ಎಸ್ಟಿ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಪೊಲೀಸ್ ಇಲಾಖೆ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದೆ.

ಡಾ.ಬಿ.ಟಿ.ಕವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net