ದೌರ್ಜನ್ಯ ಪ್ರಕರಣ ನಿಯಂತ್ರಿಸಿ

20sirsi5
Published on

ಶಿರಸಿ: ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತು ಆಯೋಗಕ್ಕೆ ಸಾಕಷ್ಟು ದೂರು ಬರುತ್ತಿವೆ. ಇವುಗಳ ನಿಯಂತ್ರಣ ಆಗಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ತಿಪ್ಪೆಸ್ವಾಮಿ ಕೆ.ಟಿ. ಸೂಚಿಸಿದರು.

ನಗರದ ಮಿನಿ ವಿಧಾನಸೌಧದಲ್ಲಿ ಬುಧವಾರ ಆಯೋಜಿಸಿದ್ದ ಮಕ್ಕಳ ರಕ್ಷಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ತಹಸೀಲ್ದಾರ್ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಮೂರು ತಿಂಗಳಿಗೊಮ್ಮೆ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ಕೆಡಿಪಿಯನ್ನು ಕಡ್ಡಾಯವಾಗಿ ನಡೆಸಬೇಕಿದೆ. ಈ ಸಭೆಯ್ಲಲಿ ಆಯಾ ಶಾಲೆ, ಅಂಗನವಾಡಿಗಳ ಸ್ಥಿತಿ ಗತಿಯ ಬಗ್ಗೆಯೂ ಚರ್ಚೆ ನಡೆಸಬೇಕು. ಶಾಲೆಗಳ ಆವರಣದೊಳಗೆ, ವಿದ್ಯಾರ್ಥಿಗಳಿಗೆ ಅಪಾಯವಾಗುವ ರೀತಿ ವಿದ್ಯುತ್ ತಂತಿ, ಟಿಸಿ ಇದ್ದರೆ ಅವುಗಳ ಸ್ಥಳಾಂತರ ಕಡ್ಡಾಯವಾಗಿ ಮಾಡಬೇಕು. ಈ ಬಗ್ಗೆ ದೃಢೀಕರಣ ಅತ್ಯಗತ್ಯ ಎಂದು ಸೂಚನೆ ನೀಡಿದರು.

ಪೊಲೀಸ್ ಹಾಗೂ ಶಿಕ್ಷಣ ಇಲಾಖೆಯಿಂದ ತೆರೆದ ಮನೆ ಕಾರ್ಯಕ್ರಮ ಕಡ್ಡಾಯವಾಗಿ ಅನುಷ್ಠಾನ ಆಗಬೇಕು. ಸಸ್ಯ ಶ್ಯಾಮಲಾ, ಚಿಣ್ಣರ ವನ, ಮಗುವಿಗೊಂದು ಮರ ಕಾರ್ಯಕ್ರಮ ಅನುಷ್ಠಾನ ಆಗಬೇಕು. ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ಎಲ್ಲ ಇಲಾಖೆಗಳು ತಮ್ಮ ಕಚೇರಿಗಳಲ್ಲಿ ಶಾಶ್ವತ ಫಲಕಗಳಲ್ಲಿ ಬರೆಸಬೇಕು ಎಂದು ಸೂಚಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಆಡುವ ವೇಳೆ ಕೃಷಿ ಹೊಂಡಗಳಿಗೆ ಬೀಳುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಕೃಷಿ ಹೊಂಡಗಳಿಗೆ ಬೇಲಿ ನಿರ್ವಣವಾದ ಬಳಿಕವೇ ಅವುಗಳ ಗುತ್ತಿಗೆದಾರರಿಗೆ ಬಿಲ್ ಪಾವತಿಸಬೇಕು. ತಾಲೂಕಿನಲ್ಲಿ ಒಟ್ಟು 18 ವಿದ್ಯಾರ್ಥಿ ನಿಲಯಗಳಿದ್ದು, ಅವುಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ನಗರಸಭೆಯಿಂದ ಗೀಸರ್ ವ್ಯವಸ್ಥೆ ಕಲ್ಪಿಸಬೇಕು. ಸುರಕ್ಷತೆ, ಊಟದ ಗುಣಮಟ್ಟಕ್ಕೆ ಮಹತ್ವ ನೀಡಬೇಕು. ಮಕ್ಕಳ ಮನಸು ಸೂಕ್ಷ್ಮವಾಗಿರುವ ಕಾರಣ ಸಿಬ್ಬಂದಿ ನಡವಳಿಕೆ ಹಿತವಾಗಿರಬೇಕು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸದಾ ನಿಗಾ ಇಡಬೇಕು. ಒಂದೊಂದು ಇಲಾಖೆಗೆ ಒಂದೊಂದು ವಸತಿ ನಿಲಯದ ಉಸ್ತುವಾರಿ ಹಾಕಬೇಕು’ ಎಂದು ಸೂಚಿಸಿದರು.

ಮಳೆಗಾಲದ ದಿನಗಳಲ್ಲಿ ಗ್ರಾಮೀಣ ಪ್ರದೇಶದಿಂದ ಶಾಲೆಗಳಿಗೆ ಬರುವ ಮಕ್ಕಳು ಹಲವು ವಿಧದ ಸಮಸ್ಯೆ ಎದುರಿಸುತ್ತಿರುತ್ತಾರೆ. ಯಾವ ಮಾರ್ಗದಲ್ಲಿ ಬಸ್ ಅಗತ್ಯವಿದೆ ಅಲ್ಲಿ ಹೆಚ್ಚುವರಿ ಬಸ್ ಬಿಡಬೇಕು. ಬಸ್ಸಿನ ಸಮಸ್ಯೆ, ಬಸ್ಸಿನ ಸಮಯದ ಸಮಸ್ಯೆ ಬಗ್ಗೆ ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ ಸಮನ್ವಯ ಸಾಧಿಸಿ ಸಮಸ್ಯೆ ನಿವಾರಿಸಬೇಕು. ತಾಲೂಕಿನಲ್ಲಿ 288 ಅಂಗವಿಕಲ ಮಕ್ಕಳಿದ್ದಾರೆ. ಅವರಿಗೆ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಕಡ್ಡಾಯ. 9 ಬಾಲ ಗರ್ಭಿಣಿಯರ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ತಾಪಂ ಇಒ ಚನ್ನಬಸಪ್ಪ ಹಾವಣಗಿ, ಗ್ರೇಡ್ -2 ತಹಸೀಲ್ದಾರ್ ರಮೇಶ ಹೆಗಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net