

ಚಿತ್ರದುರ್ಗ: ಸಮರ್ಪಕ ಸಾಕ್ಷಿ ಹಾಗೂ ದಾಖಲೆಗಳನ್ನು ಸಲ್ಲಿಸುವುದರೊಂದಿಗೆ ನ್ಯಾಯಾಲಯದಲ್ಲಿರುವ ದೌರ್ಜನ್ಯ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಸರ್ಕಾರಿ ಅಭಿಯೋಜಕರು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಡಿಸಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ, ಎಸ್‌ಸಿಎಸ್‌ಪಿ-ಟಿಎಸ್‌ಪಿ ಪ್ರಗತಿ ಪರಿಶೀಲನೆ ಹಾಗೂ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಕುರಿತ ಸಭೆಯಲ್ಲಿ ಮಾತನಾಡಿದರು.
ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶೀಘ್ರ ನ್ಯಾಯ ದೊರೆತರೆ ಬಾಧಿತರಿಗೆ ಸೂಕ್ತ ರಕ್ಷಣೆ, ಹಣಕಾಸು ಹಾಗೂ ಇತರ ಸೌಲಭ್ಯಗಳನ್ನು ಒದಗಿಸಬಹುದು ಎಂದರು.
ಬಹು ವರ್ಷಗಳ ಕಾಲ ಪ್ರಕರಣಗಳು ಉಳಿದರೆ, ಸಾಕ್ಷಿಗಳು ಸ್ಪಂದಿಸುವುದಿಲ್ಲ. ಪ್ರಕರಣಗಳು ವಿಳಂಬವಾದಷ್ಟು ಆರೋಪಿಗಳ ಖುಲಾಸೆ ಸಂಭವ ಇರುತ್ತದೆ. ಇದಕ್ಕೆ ಅವಕಾಶ ನೀಡಬಾರದು. ಮುಂದಿನ ತ್ರೈಮಾಸಿಕ ಸಭೆಗೆ ಒಟ್ಟು ಪ್ರಕರಣಗಳು, ಎಷ್ಟು ದಿನಗಳಿಂದ ಬಾಕಿ ಇವೆ, ವಿಚಾರಣೆ ಯಾವ ಹಂತದಲ್ಲಿವೆ ಎಂಬುದರ ವಿವರ ಒದಗಿಸುವಂತೆ ಸೂಚಿಸಿದರು.
ದೌರ್ಜನ್ಯ ಪ್ರತಿಬಂಧ ಕಾಯ್ದೆ ಕುರಿತಂತೆ ಜನಪ್ರತಿನಿಧಿಗಳನ್ನು ಒಳಗೊಂಡಂತೆ ಮೇಲ್ವರ್ಗದವರ ಕೇರಿಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಜನರು ಹೆಚ್ಚಾಗಿ ಸೇರುವ ವಿವಿಧ ಕಾರ್ಯಕ್ರಮಗಳಲ್ಲಿ ಕಾಯ್ದೆ ಕುರಿತಂತೆ ಜಾಗೃತಿ ಮೂಡಿಸಬೇಕು ಎಂದರು.
ದೌರ್ಜನ್ಯ ತಡೆಯುವುದು ಹಾಗೂ ಅರಿವು ಮೂಡಿಸುವುದು ನಮ್ಮೆಲ್ಲರ ಮೊದಲ ಆದ್ಯತೆ ಆಗಬೇಕು. ಜಿಲ್ಲಾ ಕೇಂದ್ರದಿಂದ ಹೆಚ್ಚು ದೂರವಿರುವ ಹಳ್ಳಿಗಳಲ್ಲಿ ಹೆಚ್ಚು ದೌರ್ಜನ್ಯ ಪ್ರಕರಣಗಳು ಕಂಡುಬರುತ್ತವೆ. ಇಂತಹ ಕಡೆ ಪೊಲೀಸರು ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಹೇಳಿದರು.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು. ತಹಸೀಲ್ದಾರ್, ಬಿಇಒಗಳು ಮಕ್ಕಳ ಮನೆಗಳಿಗೆ ತೆರಳಿ ಪಾಲಕ ರಿಗೆ ತಿಳಿಹೇಳಬೇಕು. ಹಾಸ್ಟೆಲ್ ಸೌಲಭ್ಯ ಒದಗಿಸಬೇಕು. ವಾಲ್ಮೀಕಿ, ಆದಿಜಾಂಬವ, ಭೋವಿ, ಅಂಬೇಡ್ಕರ್ ಅಭಿವೃದ್ಧಿ ನಿಗಮಗಳ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಿ ಫಲಾನುಭವಿಗಳಿಗೆ ನೆರವಾಗಬೇಕು ಎಂದು ಹೇಳಿದರು.
ಡಿವೈಎಸ್‌ಪಿ ಕೆ.ದಿನಕರ್ ಮಾತನಾಡಿ, ಪ್ರಸಕ್ತ ತ್ರೈಮಾಸಿಕ ಅವಧಿ 15 ಪ್ರಕರಣಗಳು ದಾಖಲಾಗಿದ್ದು, 12 ತನಿಖೆಯಲ್ಲಿವೆ. 3 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಹೇಳಿದರು.
*ಶೇ.100 ಪ್ರಗತಿ ಸಾಧಿಸಿ: ಎಲ್ಲ ಇಲಾಖೆಗಳು ಮಾರ್ಚ್ ಅಂತ್ಯಕ್ಕೆ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಶೇ.100 ಪ್ರಗತಿ ಸಾಧಿಸಬೇಕು. ಚುನಾವಣಾ ನೀತಿ ಸಂಹಿತೆ ಜಾರಿ ಮುನ್ನ ಕಾಮಗಾರಿಗಳನ್ನು ಆರಂಭಿಸಬೇಕು. ವಿವಿಧ ಯೋಜನೆಗಳ ಫಲಾನುಭವಿಗಳ ಪಟ್ಟಿಗೆ ಶಾಸಕರು, ಸರ್ಕಾರದಿಂದ ಅನುಮೋದನೆ ಪಡೆದುಕೊಳ್ಳಬೇಕು. ಆರ್ಥಿಕ ಪ್ರಗತಿ ಸಾಧಿಸದಿದ್ದರೆ ಶಿಸ್ತು ಕ್ರಮ ಖಚಿತವೆಂದು ಅಧಿಕಾರಿಗಳಿಗೆ ಡಿಸಿ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಮ್ಯಾನುಯಲ್ ಸ್ಕ್ಯಾವೆಂಜಿಂಗ್, ಸಫಾಯಿ ಕರ್ಮಚಾರಿಗಳ ಕುರಿತು ಚರ್ಚಿಸಲಾಯಿತು.
ಜಿಪಂ ಡಿಎಸ್ ಕೆ.ತಿಮ್ಮಪ್ಪ, ಯೋಜನಾ ನಿರ್ದೇಶಕಿ ಆರ್.ಬಿ.ನಂದಿನಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ್, ತೋಟಗಾರಿಕೆ ಉಪನಿರ್ದೇಶಕಿ ಜಿ.ಸವಿತಾ, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ, ಕೈಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಎಸ್.ಮಲ್ಲಿಕಾರ್ಜುನ್, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಎಂ.ಡಿ.ನವಕೋಟಿ, ಬೋರಸ್ವಾಮಿ ಮತ್ತಿತರರು ಇದ್ದರು.
*ನೋಟಿಸ್ ಜಾರಿ
ಸಭೆಗೆ ಗೈರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆ ಜೆಡಿಗೆ ಡಿಸಿ ಸೂಚಿಸಿದರು.
*ಕೋಟ್
ಬಾಲ್ಯ ವಿವಾಹ ಹಾಗೂ ಪೋಕ್ಸೋ ಕುರಿತು ಅರಿವು ಮೂಡಿಸುವ 16 ಕಾರ್ಯಕ್ರಮಗಳನ್ನು ವಿದ್ಯಾರ್ಥಿ ನಿಲಯಗಳಲ್ಲಿ ಮಾಡಲಾಗಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಅರಿವು ಮೂಡಿಸಲಾಗುತ್ತಿದೆ.
ಭಾರತಿ ಆರ್.ಬಣಕಾರ್, ಉಪ ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
*ಕೋಟ್
ಸಮಾಜ ಕಲ್ಯಾಣ ಇಲಾಖೆಯಿಂದ 31 ಪ್ರಕರಣಗಳಲ್ಲಿ 58 ಜನರಿಗೆ ಪರಿಹಾರ ಧನ ನೀಡಲಾಗಿದೆ. ನ್ಯಾಯಾಲಯದಲ್ಲಿ ಫೆಬ್ರವರಿ ಅಂತ್ಯಕ್ಕೆ 35 ಪ್ರಕರಣಗಳು ಬಾಕಿ ಇವೆ. ಕಳೆದ ನವೆಂಬರ್‌ನಿಂದ ಈ ವರ್ಷದ ಫೆಬ್ರವರಿವರೆಗೆ 10 ಪ್ರಕರಣಗಳಲ್ಲಿ ಆರೋಪಿಗಳು ಬಿಡುಗಡೆಯಾಗಿದ್ದಾರೆ. ಒಂದು ಪ್ರಕರಣ ಡಿಸ್‌ಚಾರ್ಜ್ ಆಗಿದೆ. ಯಾವುದೇ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆಯಾಗಿಲ್ಲ.
ಜಗದೀಶ್ ಹೆಬ್ಬಳ್ಳಿ, ಜಂಟಿ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ