ದೌರ್ಜನ್ಯ ನಡೆದಾಗ ಹೆದರದೆ ದೂರು ದಾಖಲಿಸಿ: ನ್ಯಾ. ಬಿ.ಕೆ.ದಾಕ್ಷಾಯಣಿ ಕರೆ

27_HSN_09
Published on

ಹಾಸನ: ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ದೂರು ದಾಖಲಿಸಿ ಅಪರಾಧಿಗೆ ಶಿಕ್ಷೆ ಕೊಡಿಸಬೇಕು. ಆಗ ಇಂತಹ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಪೋಕ್ಸೋ ಆಕ್ಟ್ ಕುರಿತು ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ. ದಾಕ್ಷಾಯಣಿ ಅವರು ಹೇಳಿದರು.

ಹಾಸನ ವ್ಯೆದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಲೈಂಗಿಕ ಶೋಷಣೆ ತಡೆಗಟ್ಟುವಿಕೆ, ನಿಯಂತ್ರಣ, ಪರಿಹಾರ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಮಹಿಳೆ ತನ್ನ ಮೇಲೆ ದೌರ್ಜನ್ಯ ನಡೆದಾಗ ಹೆದರದೆ ದೈರ್ಯವಾಗಿ ದೂರು ದಾಖಲಿಸಿ. ಹಾಗೆಯೇ ಕಾನೂನುಗಳನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಬಾರದು ಎಂದು ತಿಳಿಸಿದರು.

ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ.ಎಲ್.ಜಿ ಮೀರಾ ಅವರು ಮಾತನಾಡಿ, ವ್ಯೆದ್ಯಕೀಯ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವ್ಯೆದ್ಯರು, ದಾದಿಯರು ಹಾಗೂ ಇತರೆ ಸಿಬ್ಬಂದಿ ವೃತ್ತಿಯು ಶ್ರೇಷ್ಠವಾದದು ಎಂದ ಅವರು, ಈ ಕ್ಷೇತ್ರದಲ್ಲಿ ಕೆಲಸ ಮಾಡಿದ ಮಹಿಳೆಯರ ಯಶೋಗಾಥೆಯನ್ನು ಹಂಚಿಕೊಂಡರು.

ಮಂಗಳೂರಿನ ಸ್ವ ರಕ್ಷಾ ಫಾರ್ ವುಮೇನ್ ಟ್ರಸ್ಟ್ ನ ಕಾರ್ತಿಕ್ ಎಸ್. ಕಟೀಲ್ ಹಾಗೂ ಶೋಭಲತಾ ಸುರೇಶ್ ಅವರು ಸ್ವಯಂ-ರಕ್ಷಣೆ ಮತ್ತು ಸೈಬರ್ ಕ್ರೈಂ ಕುರಿತು ಪ್ರಾತ್ಯಕ್ಷಿತೆ ತರಬೇತಿ ನೀಡಿ, ನಮ್ಮನ್ನು ನಾವೇ ರಕ್ಷಿಸಿಕೊಳ್ಳುವ ಧ್ಯೇಯ ಮತ್ತು ಸರಳ ತರಬೇತಿ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿಮ್ಸ್ ನಿರ್ದೇಶಕ ಡಾ.ಬಿ. ರಾಜಣ್ಣ, ಸಂಸ್ಥೆಯು ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಸುರಕ್ಷತೆ ಮತ್ತು ಉತ್ತಮ ಕೆಲಸದ ವಾತಾವರಣ ಕಲ್ಪಿಸುವಲ್ಲಿ ಸಹಕಾರ ನೀಡುತ್ತಾ ಬಂದಿದೆ ಎಂದರು.

ಇದೇ ಸಂದರ್ಭದಲ್ಲಿ ಕಾಲೇಜಿನ 4ನೇ ಮಹಡಿಯಲ್ಲಿ ಮಹಿಳಾ ವಿಶ್ರಾಂತಿ ಕೊಠಡಿಯನ್ನು ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 800 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ತರಬೇತಿಯ ಪ್ರಯೋಜನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗಳಾದ ರೇಖಾ, ವ್ಯೆದ್ಯಕೀಯ ಅಧೀಕ್ಷಕ ಡಾ.ಕೆ.ಯು.ರಾಘವೇಂದ್ರ ಪ್ರಸಾದ್, ಶುಶ್ರೂಷಕಾಧಿಕಾರಿ ಟಿ. ಜಲಜಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net