ದೋಸ್ತಿಗಳಿಗೆ ನೈತಿಕತೆ ಇಲ್ಲ

bkt-26-3
ಬಾಗಲಕೋಟೆ ನಗರದ ಕಲಾಭವನದಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಹಮ್ಮಿಕೊಂಡಿದ್ದ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ ಕುಮಾರಸ್ವಾಮಿ ಉದ್ಘಾಟಿಸಿದರು
Published on

ಬಾಗಲಕೋಟೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಮ್ಮ ರಾಜಕೀಯ ಜೀವನದಲ್ಲಿ ಹೊಂದಾಣಿಕೆ ಮಾಡಿಕೊಂಡಿಲ್ಲ. ಅವರು ಹೊಂದಾಣಿಕೆ ಮಾಡಿಕೊಂಡಿದ್ದರೇ ೨೦೧೮ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಕಣಕ್ಕೆ ಇಳಿಸುತ್ತಿರಲಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ ಕುಮಾರಸ್ವಾಮಿ ಹೇಳಿದರು.

ನಗರದ ಕಲಾಭವನದಲ್ಲಿ ಜೆಡಿಎಸ್ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಪಕ್ಷದ ಅಭ್ಯರ್ಥಿ ಹನುಮಂತ ಮಾವಿನಮರದ ಪರವಾಗಿ ನಿರಂತರವಾಗಿ ಪ್ರಚಾರ, ಚುನಾವಣೆ ಮಾಡಿದ್ದರಿಂದ ಸಿದ್ದರಾಮಯ್ಯ ಕಡಿಮೆ ಅಂತರದಲ್ಲಿ ಗೆಲವು ಸಾಽಸಿದರು. ಹೀಗಾಗಿ ಹೊಂದಾಣಿಕೆ ರಾಜಕೀಯ ನಮ್ಮ ಪಕ್ಷ ಮಾಡುವದಿಲ್ಲ ಎಂದು ಸ್ಪಷ್ಟಪಡಿಸಿದರು.

ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಬಳಿಕ ರಾಜ್ಯಕ್ಕೆ ಅವರ ಅನುಪಸ್ಥಿತಿ ಕಾಡುತ್ತಿದೆ. ಇದನ್ನು ಯಾರಿಂದಲೂ ಭರಿಸಲು ಸಾಧ್ಯವಿಲ್ಲ. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಎಲ್ಲ ವರ್ಗದ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ದೇಶದ ಅಭಿವೃದ್ಧಿ ಬಗ್ಗೆ ಚಿಂತನೇ ನಡೆಸಿ ಎನ್‌ಡಿಎಗೆ ಬೆಂಬಲ ನೀಡಿದರು ಎಂದರು.

ಮಾಜಿ ಪ್ರಧಾನಿ ದೇವೇಗೌಡರ ತಮ್ಮ ೯೨ ವಯಸ್ಸಿನಲ್ಲೂ ಪಕ್ಷ ಸಂಘಟನೆಯ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸ ಚಿಂತನೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ನಾವು ಸುಮ್ಮನೇ ಕುಳಿತರೇ ಆಗುವದಿಲ್ಲ. ಸಣ್ಣ ಪ್ರಯತ್ನ ಮಾಡಿದರೇ ಸಾಕು ಲಕ್ಷಾಂತರ ಸದಸ್ಯರು ನಮ್ಮ ಪಕ್ಷಕ್ಕೆ ಆಗಮಿಸುತ್ತಾರೆ. ಸಂಘಟನೆಯಲ್ಲಿ ಶಕ್ತಿ ಅಡಗಿದೆ. ಜಿ.ಪಂ, ತಾ.ಪಂ ಚುನಾವಣೆ ಗೆಲ್ಲಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸುರೇಶ ಬಾಬು ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯಾಗಿದ್ದುಕೊಂಡು ಜನರ ಮನೆಗಳಿಗೆ ತೆರಳಿ ಅಲ್ಲಿದ್ದು, ಅವರ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಬಗೆಹರಿಸುವ ಕೆಲಸವನ್ನು ದೇಶದಲ್ಲೇ ಮೊದಲ ಬಾರಿಗೆ ಮಾಡಿದವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ. ಇಂತಹ ಕಾರ್ಯವನ್ನು ಅನುಕರಣೆ ಮಾಡಲು ಮುಂದಾಗಿದ್ದ ರಾಹುಲ್ ಗಾಂಽಗೆ ಇದು ಸಾಧ್ಯವಾಗಲಿಲ್ಲ ಎಂದರು.

ಸದಾ ಜನರ ಬಗ್ಗೆ ಚಿಂತಿಸುವ ಜೆಡಿಎಸ್ ಪಕ್ಷವನ್ನು ಗಟ್ಟಿಗೊಳಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಪ್ರತಿ ಬೂತ್ ಮಟ್ಟದಲ್ಲಿ ಎಲ್ಲ ಜಾತಿಯ ಕನಿಷ್ಠ ೩ ಜನರನ್ನು ಜೆಡಿಎಸ್ ಸದಸ್ಯರನ್ನಾಗಿ ಮಾಡಬೇಕು. ಜತೆಗೆ ಅಲ್ಲಿನ ಸಮಸ್ಯೆಗಳನ್ನು ಕೇಳಿ, ಬಗೆಹರಿಸುವ ಕೆಲಸವನ್ನು ಮಾಡಬೇಕಿದೆ. ಅಂದಾಗ ಜನರಿಗೆ ಪಕ್ಷದ ಮೇಲೆ ನಂಬಿಕೆ ಮೂಡಲು ಸಾಧ್ಯ. ಬೂತ್ ಮಟ್ಟದಲ್ಲಿ ಸಮಿತಿ ಮಾಡಿ ಅವರನ್ನು ಪಕ್ಷದ ರಾಜ್ಯದ ಕಚೇರಿಗೆ ಕಳುಹಿಸಿ ಎಂದರು.

ಶಾಸಕರಾದ ರಾಜುಗೌಡ ಪಾಟೀಲ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮುಖಂಡರಾದ ಆರ್.ಚೌಡಾರೆಡ್ಡಿ, ಹಾಲಕೋಡ ಹನುಮಂತಪ್ಪ, ಸಿದ್ದು ಬಂಡಿ, ವೆಂಕಟರಾವ ನಾಡಗೌಡ, ಬಿ.ಡಿ.ಪಾಟೀಲ ಹಾಗೂ ಯುವ ಮುಖಂಡ ಗೋಪಾಲ ಲಮಾಣಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net