

ಬೀರೂರು: ಪಟ್ಟಣದ ಅಶೋಕನಗರ ಚೊಕ್ಕಾಪುರ ಚೌಡೇಶ್ವರಿ ದೇವಸ್ಥಾನ ಆವರಣದಲ್ಲಿ ದೋಸ್ತಿ ದರ್ಬಾರ್ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಶುಕ್ರವಾರ ಅದ್ದೂರಿ ಮೆರವಣಿಗೆ ನಡೆಸಿ ದೇವನಕೆರೆಯಲ್ಲಿ ವಿಸರ್ಜಿಸಲಾಯಿತು.
ಗಣೇಶ ಚತುರ್ಥಿಯಂದು ಸ್ಥಾಪಿಸಲಾಗಿದ್ದ ಗಣೇಶ ಮೂರ್ತಿಗೆ ಪ್ರತಿ ದಿನ ಅಲಂಕಾರ, ಪೂಜೆ ನಡೆಯುತ್ತಿತ್ತು. ಗುರುವಾರ ಸಾರ್ವಜನಿಕ ಅನ್ನಸಂರ್ಪಣೆ ನೆರವೇರಿಸಲಾಯಿತು. ಶುಕ್ರವಾರ ಪೂಜೆ, ಮಂಗಳಾರತಿ ನೆರವೇರಿದ ಬಳಿಕ ಅಲಂಕೃತ ವಾಹನದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಸರ್ಜನಾ ಮೆರವಣಿಗೆ ನಡೆಸಲಾಯಿತು. ದಾರಿಯುದ್ದಕ್ಕೂ ಮಹಿಳೆಯರು ಹಣ್ಣುಕಾಯಿ ಅರ್ಪಿಸಿ ಪೂಜೆ ಮಾಡಿಸಿದರು. ಬಿ.ಎಚ್.ರಸ್ತೆ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದ ಬಳಿ ಮೆರವಣಿಗೆ ಬಂದಾಗ ಪಟ್ಟಣದ ಜನರು ಸೇರಿದರು. ಡಿಜೆ ಸದ್ದಿಗೆ ಯುವಜನರು ಕುಣಿದು ಸಂಭ್ರಮಿಸಿದರು. ನಂತರ ಚಿತ್ತಾಕರ್ಷಕ ಪಟಾಕಿ ಸಿಡಿಸಲಾಯಿತು. ನಂತರ ಲಿಂಗದಹಳ್ಳಿ ರಸ್ತೆಯ ಮೂಲಕ ಹೊರಟ ಮೆರವಣಿಗೆಗೆ ಅಕ್ಕಪಕ್ಕದಲ್ಲಿ ಕಿಕ್ಕಿರಿದು ನಿಂತ ಜನತೆ ಜೈಕಾರ ಕೂಗುತ್ತ ಭಗೀರಥ ವೃತ್ತದವರೆಗೂ ಸಾಗಿದರು. ಅಲ್ಲಿ ಪುನಃ ಪಟಾಕಿ ಸಿಡಿಸಿ, ಹಾಡುಗಳಿಗೆ ಕುಣಿದು ಸಂಭ್ರಮಿಸಿದರು. ನಂತರ ಕೆರೆಯಲ್ಲಿ ವಿಸರ್ಜಿಸಲಾಯಿತು. ಮೆರವಣಿಗೆಗೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.