

ಧಾರವಾಡ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2020-21ನೇ ಸಾಲಿಗೆ ಜಿಲ್ಲೆಯ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭವಾಗಿದೆ. ಹೊಸ ಮತದಾರರ ಸೇರ್ಪಡೆ, ತಿದ್ದುಪಡಿ, ಸ್ಥಳ ಬದಲಾವಣೆ ಸೇರಿ ವಿವಿಧ ಹಕ್ಕು, ಆಕ್ಷೇಪಣೆಗಳಿಗೆ ನಿಗದಿತ ಅರ್ಜಿ ನಮೂನೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು. ರಾಜಕೀಯ ಪಕ್ಷಗಳ ಪದಾಧಿಕಾರಿಗಳು, ಕಾರ್ಯಕರ್ತರು, ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ದೋಷರಹಿತ ಮತದಾರರ ಪಟ್ಟಿ ತಯಾರಿಗೆ ಸಹಕಾರ ನೀಡಬೇಕು ಎಂದು ಕೋರಿದರು.
ಜನರಿಂದ ಸ್ವೀಕೃತವಾಗುವ ಅರ್ಜಿ 6,7,8 ಮತ್ತು 8(ಎ) ನಮೂನೆ ಪರಿಶೀಲಿಸಿ ಪೂರಕ ಮತದಾರ ಪಟ್ಟಿ ಕರಡು ಪ್ರತಿಯನ್ನು ನ. 16ರಂದು ಪ್ರಕಟಿಸಲಾಗುತ್ತದೆ. ಕರಡು ಮತದಾರ ಪಟ್ಟಿಯಲ್ಲಿನ ವಿಷಯಗಳಿಗೆ ತಕರಾರು ಸಲ್ಲಿಸಲು ಡಿ. 15ರವರೆಗೆ ಅವಕಾಶವಿದೆ. ನ. 16 ಹಾಗೂ ಡಿ. 15ರೊಳಗಿನ ಶನಿವಾರ ಮತ್ತು ಭಾನುವಾರ ಗುರುತಿಸಿ, ಮತದಾರ ಪಟ್ಟಿ ಪರಿಷ್ಕರಣೆ, ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಪ್ರಸ್ತುತ ಜಿಲ್ಲೆಯಲ್ಲಿ 7,73,041 ಪುರುಷ, 7,59,732 ಮಹಿಳಾ ಹಾಗೂ 105 ತೃತೀಯಲಿಂಗಿ ಮತದಾರರು ಸೇರಿ ಒಟ್ಟು 15,32,878 ಜನ ಮತದಾರರಿದ್ದರೆ. ಇದರಲ್ಲಿ 1,923 ಸೇವಾ ಮತದಾರರು, 13,106 ವಿಶೇಷ ಚೇತನ ಮತದಾರರು ಸೇರ್ಪಡೆಗೊಂಡಿದ್ದಾರೆ. ವಿವಿಧ ತಾಲೂಕುಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 1,634 ಮತಗಟ್ಟೆಗಳಿವೆ ಎಂದರು.
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಇತರೆ ಹಕ್ಕು ಮತ್ತು ಆಕ್ಷೇಪಣಾ ಅರ್ಜಿಗಳನ್ನು ಮತಗಟ್ಟೆ ಅಧಿಕಾರಿ, ಮತದಾರರ ನೋಂದಣಿ ಅಧಿಕಾರಿ, ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳಲ್ಲಿ ಹಾಗೂ ಆನ್ಲೈನ್ನಲ್ಲೂ ಸಲ್ಲಿಸಬಹುದು. ಹೆಸರು ಸೇರ್ಪಡೆಗೆ ನಮೂನೆ-6, ಹೆಸರು ಕಡಿಮೆ ಮಾಡಲು ನಮೂನೆ-7, ಮತದಾರರ ಹೆಸರು, ಇತರೆ ತಿದ್ದುಪಡಿಗೆ ನಮೂನೆ-8 ಮತ್ತು ಮತದಾರರು ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಭಾಗದಿಂದ ಇನ್ನೊಂದು ವಿಭಾಗ, ಭಾಗ ಸಂಖ್ಯೆಗೆ ವರ್ಗಾವಣೆ ಮಾಡುವುದಿದ್ದಲ್ಲಿ ನಮೂನೆ- 8ಎ ಸಲ್ಲಿಸಬೇಕು ಎಂದರು.
ರಾಜಕೀಯ ಪಕ್ಷಗಳು ಮತಗಟ್ಟೆ ಮಟ್ಟದಲ್ಲಿ ಏಜೆಂಟರನ್ನು ನೇಮಿಸಿ, ನಿಗದಿತ ನಮೂನೆಯಲ್ಲಿ ಮಾಹಿತಿ ಸಲ್ಲಿಸಬೇಕು. ಏಜೆಂಟರು ವಿಶೇಷ ಅಭಿಯಾನದಂದು ಹಾಜರಿದ್ದು ಅರ್ಜಿ ಸಲ್ಲಿಸಬಹುದು. ಆದರೆ ಅರ್ಜಿಗಳನ್ನು ಸಗಟಾಗಿ ನೀಡಲು ಅವಕಾಶವಿಲ್ಲ. ಪ್ರತಿ ಮತಗಟ್ಟೆ ಏಜೆಂಟರು ಒಂದು ಸಲಕ್ಕೆ ಅಥವಾ ದಿನಕ್ಕೆ 10 ಅರ್ಜಿ ಮಾತ್ರ ಸಲ್ಲಿಸಬಹುದು ಎಂದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾಧಿಕಾರಿ ಕಚೇರಿ ಚುನಾವಣಾ ತಹಸೀಲ್ದಾರ್ ಎಚ್.ಎನ್. ಬಡಿಗೇರ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಮಲ್ಲಿಕಾರ್ಜುನ ಸಾಹುಕಾರ, ರಾಮಪ್ಪ ಬಡಿಗೇರ, ಪ್ರೇಮನಾಥ ಚಿಕ್ಕತುಂಬಳ, ದೇವರಾಜ ಕಂಬಳಿ, ಪ್ರಕಾಶ ಹಳಿಯಾಳ, ವಿನೋದ ಘೊಡಕೆ, ಜಾವಿದ್ ಬೆಳಗಾವಂಕರ, ಸಿದ್ದು ಕಲ್ಯಾಣಶೆಟ್ಟಿ, ಬಸವರಾಜ ಗರಗ, ಸಂತೋಷ ಚವ್ಹಾಣ, ವಿಕಾಸ ಸೊಪ್ಪಿನ, ಸಂತೋಷ ನರಗುಂದ, ಮಹೇಶ ಬುರ್ಲಿ, ಇತರರು ಇದ್ದರು.
ಜ. 15ರಂದು ಅಂತಿಮ ಪಟ್ಟಿ
ಮತದಾರರಿಂದ ಬಂದ ಹೆಸರು ಸೇರ್ಪಡೆ, ಹೆಸರು, ವಿಳಾಸ ತಿದ್ದುಪಡಿ, ವರ್ಗಾವಣೆ, ಸೇರ್ಪಡೆಯಾದ ಹೆಸರು ರದ್ದುಗೊಳಿಸುವ ಕುರಿತು ಸ್ವೀಕರಿಸಿದ ಎಲ್ಲ ಅರ್ಜಿ ನಮೂನೆಗಳನ್ನು ಪರಿಶೀಲಿಸಿ, ತಕರಾರು ಅವಧಿಯನ್ನು 2021ರ ಜ. 5ರಂದು ಮುಕ್ತಾಯಗೊಳಿಸಲಾಗುತ್ತದೆ. ಜ. 15ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
EndFragment