ದೋರನಹಳ್ಳಿಯಲ್ಲಿ ಮಾಯವಾದ ಶುಚಿತ್ವ

ydg01
Published on

ದೋರನಹಳ್ಳಿ: ಡೆಂಘೆ ಸೇರಿ ಇತರೆ ಸಾಂಕ್ರಾಮಿಕ ರೋಗ ಹರಡುತ್ತಿರುವುದರಿಂದ ಸರ್ಕಾರ ಎಲ್ಲೆಡೆ ಈ ಕುರಿತು ಜಾಗೃತಿ ಮೂಡಿಸುತ್ತಿದೆ. ಆದರೆ ದೋರನಹಳ್ಳಿಯಲ್ಲಿ ಸ್ವಚ್ಛತೆ ಎಂಬುದು ಮರಿಚಿಕೆಯಾಗಿದ್ದು, ಎಲ್ಲೆಂದರಲ್ಲಿ ಕಸದ ರಾಶಿ ಮತ್ತು ಚರಂಡಿ ನೀರು ಹರಿದು ಗಬ್ಬೆದ್ದು ನಾರುತ್ತಿದೆ.

ಮೂಗು ಮುಚ್ಚಿಕೊಂಡೆ ಹೊರ ಬರಬೇಕು. ಹೆಜ್ಜೆ ಇಡಬೇಕೆಂದರೆ ಭಯದಲ್ಲಿಡಬೇಕು. ಸಂಜೆಯಾಗುತ್ತಲೇ ರಕ್ತ ಹೀರುವ ಸೊಳ್ಳೆಗಳ ಕಾಟ ವಿಪರೀತವಾಗಿದ್ದು ಇಂತಹ ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ ಜಿಲ್ಲೆಯ ದೊಡ್ಡ ಗ್ರಾಮವಾದ ದೋರನಹಳ್ಳಿ ಜನರಿಗೆ. ಒಟ್ಟು ೩೫ ಸದಸ್ಯ ಬಲವುಳ್ಳ ಗ್ರಾಮ ಪಂಚಾಯಿತಿ ಇದ್ದರೂ ಅಧಿಕಾರಕ್ಕುಂಟು ಅಭೀವೃದ್ಧಿಗಲ್ಲ ಎನ್ನುವಂತಾಗಿದೆ. ಪ್ರತಿ ವರ್ಷ ಮಳೆಗಾಲ ಬಂದರೆ ಇಲ್ಲಿನ ಜನ ಅಕ್ಷರಶಹಃ ನರಕಯಾತನೆ ಅನುಭವಿಸುವುದು ಸುಳ್ಳಲ್ಲ. ಗ್ರಾಮ ದಿನೇ ದಿನೆ ತನ್ನ ವ್ಯಾಪ್ತಿ ವಿಸ್ತರಿಸುತ್ತಾ ಬೆಳೆಯುತ್ತಿದೆ. ಆದರೆ ಗ್ರಾಮದ ಬೆಳವಣಿಗೆಗೆ ತಕ್ಕ ಅಭೀವೃದ್ಧಿ ಮತ್ತು ಮೂಲಭೂತ ಸೌಕರ್ಯ ಸಿಗುವುದು ಕಷ್ಟವಾಗಿದೆ.

ಗ್ರಾಮದಲ್ಲಿ ೧೧ ವಾರ್ಡಗಳಿದ್ದು ನೂರಾರು ಚರಂಡಿಗಳಿವೆ. ಆ ಎಲ್ಲ ಚರಂಡಿಗಳಲ್ಲಿ ತ್ಯಾಜ್ಯ ವಸ್ತುಗಳಾದ ಪ್ಲಾಸ್ಟಿಕ್, ತೆಂಗಿನ ಚಿಪ್ಪು, ಶೀಷೆ, ಚಪ್ಪಲಿ, ಕಟ್ಟಿಗೆ ತುಂಡುಗಳು, ಕಲ್ಲಿನ ಚೂರುಗಳು ಹೀಗೆ ತುಂಬಿ ಚರಂಡಿಗಳು ಇರುವ ಕುರುಹು ಕೂಡಾ ಇಲ್ಲದಂತಾಗಿವೆ ಕೆಲವು ಕಡೆ. ಇದರಿಂದ ಮನೆಗಳಿಂದ ಬರುವ ತ್ಯಾಜ್ಯ ನೀರು, ಮಳೆ ನೀರು ಮುಂದೆ ಹರಿದು ಹೋಗದೆ ರಸ್ತೆಗಳಿಗೆ, ರಸ್ತೆಯ ಇಕ್ಕೆಲಗಳಲ್ಲಿ ನಿಂತು ದುರ್ನಾತ ಬೀರಿದರೆ ಅದರೊಟ್ಟಿಗೆ ಮಿತಿ ಮೀರಿದ ಸೊಳ್ಳೆಕಾಟವೂ ಹೆಚ್ಚುತ್ತಿದೆ.

ಇನ್ನೂ ಯಾದಗಿರಿ-ಶಹಾಪುರ ಸಂರ್ಪಕದ ರಾಜ್ಯ ಹೆದ್ದಾರಿಯ ಎಡ ಬಲ ಚರಂಡಿಗಳು ಸಂಪೂರ್ಣ ಹೂತು ಹೋಗಿದ್ದು ಹೆದ್ದಾರಿಗೆ ಬರುವ ಚರಂಡಿ ನೀರು ಕೆಸರು ಗದ್ದೆಯಂತೆ ಭಾಸವಾಗುತ್ತಿದೆ. ಇಲ್ಲಿಂದಲೇ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಬಸ್ಸಿಗಾಗಿ ಕಾಯುತ್ತಾ ನಿಲ್ಲುತ್ತಾರೆ ಅವರಿಗೆ ರೋಗದ ಭೀತಿ ಕಾಡಿದರೆ ಅಂಬೇಡ್ಕರ್ ನಗರದ ಹಿರಿಯ ಪ್ರಾಥಮಿಕ ಶಾಲೆ, ಹಿರೇ ಅಗಸಿಯ ಹಿರಿಯ ಪ್ರಾಥಮಿಕ ಶಾಲೆ, ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಈ ದುರ್ನಾದಿಂದ ಬೇಸತ್ತು ಹೋಗಿದ್ದಾರೆ. ಶಾಲಾ ಮಕ್ಕಳಿಗೆ ಸಾಂಕ್ರಾಮಿಕ ರೋಗ ಭೀತಿ ಹೆಚ್ಚಾಗಿದೆ. ಇನ್ನಾದರೂ ಗ್ರಾಪಂ ಎಚ್ಚೇತ್ತು ಕೂಡಲೇ ಕ್ರಮ ಕೈಗೊಳ್ಳುತ್ತಾ ಕಾದು ನೋಡಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net