ದೊರೆಸ್ವಾಮಿ ಅವರ ಪಿಂಚಣಿ ರದ್ದು ಮಾಡಿ

3 smg 4
Published on

ಶಿವಮೊಗ್ಗ: ಸ್ವಾತಂತ್ರ್ಯೕರ ಸಾವರ್ಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಎಚ್.ಎಸ್.ದೊರೆಸ್ವಾಮಿ ಅವರ ಪಿಂಚಣಿ ರದ್ದು ಮಾಡಬೇಕೆಂದು ಒತ್ತಾಯಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳ ಕಾರ್ಯಕರ್ತರು ಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ದೊರೆಸ್ವಾಮಿ ಅವರ ಇತ್ತೀಚಿನ ನಡವಳಿಕೆ ಅವರು ನಿಜವಾಗಿಯೂ ಸ್ವಾತಂತ್ರ್ಯ ಹೋರಾಟ ಮಾಡಿದ್ದಾರೆಯೇ ಎಂಬ ಅನುಮಾನ ಮೂಡಿಸಿದೆ. ತನಿಖೆ ನಡೆಸಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದಿದ್ದಲ್ಲಿ ಅವರ ಪಿಂಚಣಿ ರದ್ದು ಮಾಡಬೇಕೆಂದು ಆಗ್ರಹಿಸಿದರು.

ರಾಜ್ಯದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿಕೊಳ್ಳುವ ದೊರೆಸ್ವಾಮಿ ಅವರು ವೀರ ಸಾವರ್ಕರ್ ರಾಷ್ಟ್ರಪ್ರೇಮ, ತ್ಯಾಗ, ಬಲಿದಾನದ ಬಗ್ಗೆ ಹಗುರವಾಗಿ ಮಾತನಾಡುವುದು ದೇಶದ್ರೋಹವೇ ಆಗಿದೆ ಎಂದು ದೂರಿದರು.

ನೇತಾಜಿ ಸುಭಾಷ್ ಚಂದ್ರಭೋಸ್ ಐಎನ್​ಎ ಸ್ಥಾಪಿಸಲು ಮೂಲ ಪ್ರೇರಣೆಯೇ ವೀರ ಸಾವರ್ಕರ್. ಅವರ ಆಲೋಚನೆ ಹಾಗೂ ಹೋರಾಟದಿಂದ ಬೆದರಿದ ಆಂಗ್ಲ ಸರ್ಕಾರ 1909ರಲ್ಲಿ ಬಂಧಿಸಿ 48 ವರ್ಷಗಳ ಕಾಲ ಜಾರಿಯಲ್ಲಿರುವಂತೆ ಕಾಲಪಾನಿ ಶಿಕ್ಷೆ ವಿಧಿಸಿ ಅಂಡಮಾನ್ ಸೆಲ್ಯುಲರ್ ಜೈಲಿಗೆ ಕಳುಹಿಸಿದ್ದು ಇತಿಹಾಸ. ದೇಶಪ್ರೇಮಕ್ಕಾಗಿ 48 ವರ್ಷ 2 ಅವಧಿಯ ಜೀವಾವಧಿ ಶಿಕ್ಷೆ ಪಡೆದ ವಿಶ್ವದ ಮೊದಲ ವ್ಯಕ್ತಿ ವೀರ ಸಾವರ್ಕರ್. ಅಂತಹ ಮಹಾನ್ ದೇಶಭಕ್ತನ ಬಗ್ಗೆ ದೊರೆಸ್ವಾಮಿ ಮಾತನಾಡಿರುವುದು ಅವರ ನೈತಿಕ ಮೌಲ್ಯ ಹಾಗೂ ಬೌದ್ಧಿಕ ಅಧಃಪತನವೇ ಸರಿ ಎಂದು ಬೇಸರ ವ್ಯಕ್ತಪಡಿಸಿದರು.

ಸಾವರ್ಕರ್ ಹೋರಾಟಕ್ಕೆ ದೇಶದ ಮೂಲೆ ಮೂಲೆಯಲ್ಲಿಯೂ ಐತಿಹಾಸಿಕ ದಾಖಲೆ ಸಿಗುತ್ತದೆ. ದೊರೆಸ್ವಾಮಿ ಅವರ ಹೋರಾಟಕ್ಕೆ ಯಾವುದೇ ಸಾಕ್ಷ್ಯ ಸಿಗದಿರುವುದು ಅನುಮಾನದ ಸಂಗತಿ ಎಂದು ಹೇಳಿದರು.

ಮಾಜಿ ನಕ್ಸಲರೊಂದಿಗೆ ಒಡನಾಟ, ಪಾಕಿಸ್ತಾನ ಪರ ಘೊಷಣೆ ಕೂಗಿದ ಅಮೂಲ್ಯಾ ಅವರ ಅನುಯಾಯಿಯಾಗಿದ್ದಾರೆ. ಅವರ ಸ್ವಾತಂತ್ರ್ಯ ಹೋರಾಟದ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕೆಂದು ಆಗ್ರಹಿಸಿದರು.

ವಿಎಚ್​ಪಿ ಜಿಲ್ಲಾಧ್ಯಕ್ಷ ರಮೇಶ್​ಬಾಬು ಜಾಧವ್, ಜಿಲ್ಲಾ ಕಾರ್ಯದರ್ಶಿ ನಟರಾಜ್, ಬಜರಂಗದಳ ಜಿಲ್ಲಾ ಸಂಚಾಲಕ ನಾರಾಯಣ ವರ್ಣೆಕರ್, ಸುಧಾಕರ್, ಸತೀಶ್, ರಾಜೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net