ದೊಮ್ಮನಗದ್ದೆಯಲ್ಲಿ ವಿಜೃಂಭಣೆಯ ದೇವರ ಉತ್ಸವ

05 HANUR 2 A (1)
ಕಾಮಧೇನು ದೇವರ ಉತ್ಸವ ಮೂರ್ತಿ
Published on

ಹನೂರು: ವಿಜಯದಶಮಿ ಜಾತ್ರಾ ಮಹೋತ್ಸವ ಅಂಗವಾಗಿ ತಾಲೂಕಿನ ದೊಮ್ಮನಗದ್ದೆ ಗ್ರಾಮದ ಶ್ರೀ ಶನೈಶ್ಚರಸ್ವಾಮಿ ದೇಗುಲದಲ್ಲಿ ಬುಧವಾರ ವಿವಿಧ ದೇವರ ಉತ್ಸವಗಳು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.


ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇಗುಲ ವಿವಿಧ ಪುಷ್ಪ, ತಳಿರು-ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಆಯುಧ ಪೂಜೆಯಂದು ಸ್ವಾಮಿಗೆ ಗಣಪತಿಪೂಜೆ, ಗಣಹೋಮ, ನವಗ್ರಹಹೋಮ, ವಾಸ್ತುಹೋಮ ಸೇರಿದಂತೆ ಇತರ ಹೋಮಗಳನ್ನು ನೆರವೇರಿಸಲಾಯಿತು.


ಬುಧವಾರ ಬೆಳಿಗ್ಗೆ ತತ್ವಹೋಮ, ಕಳಶಾರ್ಚನೆ, ಕಳಸಹೋಮ, ಶಾಂತಿ ಹೋಮಾಧಿಗಳು ನೆರವೇರಿತು. ಈ ಸಂದರ್ಭದಲ್ಲಿ ಭಕ್ತರು ಪೂಜೆ ಸಲ್ಲಿಸಿದರು. ಹರಕೆ ಹೊತ್ತು ಭಕ್ತರು ಅಭಿಷೇಕ, ವಿಶೇಷ ಪೂಜೆ ಹಾಗೂ ಕಾಣಿಕೆ ಸಲ್ಲಿಸಿದರು.


ವಿಜೃಂಭಣೆಯ ಉತ್ಸವ: ದೇಗುಲದಲ್ಲಿ ಬೆಳಗ್ಗೆ ಹುಲಿವಾಹನ, ನಾಗಾಭರಣ, ಗರುಡವಾಹನ, ಕಾಮಧೇನು ಹಾಗೂ ಕಲ್ಪವೃಕ್ಷ ಉತ್ಸವಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮೂರ್ತಿಗಳನ್ನು ಪ್ರತ್ಯೇಕ ಉತ್ಸವ ವಾಹನಗಳಲ್ಲಿ ಕೂರಿಸಿ ವಿವಿಧ ಪುಷ್ಪಗಳಿಂದ ಸಿಂಗಾರ ಮಾಡಲಾಯಿತು. ಸತ್ತಿಗೆ, ಸೂರಿಪಾನಿ ವಾದ್ಯಮೇಳ ಸಮೇತ ಮೆರವಣಿಗೆಯಲ್ಲಿ ಕರೆತಂದು ದೇವಾಲಯ ಸಮೀಪದಲ್ಲಿರುವ ಬನ್ನಿಮರಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಲಾಯಿತು. ಈ ವೇಳೆ ಭಕ್ತರು ಪಟಾಕಿ ಸಿಡಿಸಿ ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.


ಕೊಳ್ಳೇಗಾಲ, ಮಹದೇಶ್ವರಬೆಟ್ಟ, ಕೌದಳ್ಳಿ, ರಾಮಾಪುರ, ಎಲ್ಲೇಮಾಳ, ಹನೂರು, ಶಾಗ್ಯ, ಬಂಡಳ್ಳಿ, ಲೊಕ್ಕನಹಳ್ಳಿ, ಮಣಗಳ್ಳಿ, ಮಲ್ಲಯ್ಯನಪುರ, ಪಳನಿಮೇಡು ಸತ್ತಾರಮೇಡು, ಕುರಟ್ಟಿಹೊಸೂರು, ದಿನ್ನಳ್ಳಿಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ದೇಗುಲದ ವತಿಯಿಂದ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net