ಹನೂರು: ತಾಲೂಕಿನ ದೊಮ್ಮನಗದ್ದೆ ಗ್ರಾಮದ ಶ್ರೀ ಶನೈಶ್ಚರಸ್ವಾಮಿ ದೇವಾಲಯದಲ್ಲಿ 58ನೇ ವರ್ಷದ ದಸರಾ ಅಂಗವಾಗಿ ಗುರುವಾರ ವಿವಿಧ ದೇವರ ಉತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ದೇಗುಲವನ್ನು ತಳಿರು, ತೋರಣ, ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಾಲಂಕಾರ ಕೈಗೊಂಡು ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಆಯುಧ ಪೂಜೆಯಂದು ದೇಗುಲದಲ್ಲಿ ಸ್ವಾಮಿಗೆ ಪುಣ್ಯಾವಾಚನ, ನವಗ್ರಹ ಹೋಮ, ಅಭಿಷೇಕ ಹಾಗೂ ಆಯುಧಪೂಜೆ ವಿಧಿವಿಧಾನಗಳು ನೆರವೇರಿದವು.
ವಿಜೃಂಭಣೆಯ ಉತ್ಸವ
ವಿಜಯದಶಮಿಯಂದು ದೇಗುಲದಲ್ಲಿ ಬೆಳಗ್ಗೆ ಸ್ವಾಮಿಯ ಮೂರ್ತಿಗೆ ಎಣ್ಣೆಮಜ್ಜನ ಅಭಿಷೇಕ, ಹಾಲಿನ ಅಭಿಷೇಕ ಹಾಗೂ ಪಂಚಾಭಿಷೇಕ ನೆರವೇರಿಸಲಾಯಿತು. ಹುಲಿವಾಹನ, ನಾಗಾಭರಣ, ಗರುಡವಾಹನ, ಕಾಮಧೇನು ಹಾಗೂ ಕಲ್ಪವೃಕ್ಷ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮೂರ್ತಿಗಳನ್ನು ಪ್ರತ್ಯೇಕ ವಾಹನಗಳಲ್ಲಿ ಕೂರಿಸಿ ವಿವಿಧ ಪುಷ್ಪಗಳಿಂದ ಸಿಂಗರಿಸಲಾಯಿತು. ಬಳಿಕ ಸತ್ತಿಗೆ, ಸೂರಿಪಾನಿ ವಾದ್ಯಮೇಳದೊಂದಿಗೆ ದೇಗುಲದ ಸುತ್ತ 9 ಬಾರಿ ಪ್ರದಕ್ಷಿಣೆ ಹಾಕಿಸಲಾಯಿತು. ಬಳಿಕ ವಿವಿಧ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮೂಲಕ ದೇಗುಲದ ಸಮೀಪದಲ್ಲಿರುವ ಬನ್ನಿಮರಕ್ಕೆ ಕೊಂಡೊಯ್ದು ಗಣಪತಿ ಪೂಜೆ, ಕಾಶಿ ವಿಶ್ವನಾಥಸ್ವಾಮಿ, ಛಾಯಾದೇವಿ, ಆಂಜನೇಯಸ್ವಾಮಿ, ಸುಬ್ರಹ್ಮಣ್ಯಸ್ವಾಮಿ, ನವಗ್ರಹ ದೇವತೆಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಈ ವೇಳೆ ಭಕ್ತರು ಪಟಾಕಿ ಸಿಡಿಸಿ ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಕೊಳ್ಳೇಗಾಲ, ಮಹದೇಶ್ವರಬೆಟ್ಟ, ಕೌದಳ್ಳಿ, ರಾಮಾಪುರ, ಎಲ್ಲೇಮಾಳ, ಹನೂರು, ಶಾಗ್ಯ, ಬಂಡಳ್ಳಿ, ಲೊಕ್ಕನಹಳ್ಳಿ, ಮಣಗಳ್ಳಿ, ಮಲ್ಲಯ್ಯನಪುರ, ಪಳನಿಮೇಡು ಸತ್ತಾರಮೇಡು, ಕುರಟ್ಟಿಹೊಸೂರು, ದಿನ್ನಳ್ಳಿ ಸೇರಿದಂತೆ ಈ ಭಾಗದ ಇನ್ನಿತರ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ದೇಗುಲದ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು.