

ಅರಸೀಕೆರೆ(ಗ್ರಾಮಾಂತರ)
ತಾಲೂಕಿನ ಕಸಬಾ ಹೋಬಳಿಯ ಹಾರನಹಳ್ಳಿ ಸಮೀಪದ ದೊಡ್ಡೇನಹಳ್ಳಿಯಲ್ಲಿ
ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಹಯೋಗದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ(ಪ.ಜಾ) ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಾಗಿ 7 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ 12 ವಸತಿ ಗೃಹಗಳನ್ನು ಮಂಗಳವಾರ ಶಾಸಕ ಹಾಗೂ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಉದ್ಘಾಟಿಸಿದರು.
ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ಭಾಗದ ಬಡ ಕುಟುಂಬ ವಿದ್ಯಾರ್ಥಿಗಳಿಗೆ ಒಂದೇ ಸೂರಿನಡಿ ವಿದ್ಯಾಭ್ಯಾಸ ನೀಡಲು ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಹೋರಾಟದ ಫಲ ನಾನು ಶಾಸಕನಾದ ಮೇಲೆ 6 ವಸತಿ ಶಾಲೆಗಳನ್ನು ತೆರೆಯಲಾಗಿದೆ. ಬೋಧಕ ಮತ್ತು ಬೋಧಕ ಕುಟುಂಬಗಳು ಉಳಿಯಲು ಇಲ್ಲೇ ಸುಸಜ್ಜಿತ ವಸತಿ ಗೃಹಗಳನ್ನೂ ನಿರ್ಮಿಸಲಾಗಿದ್ದು, ಇಂದು ಉದ್ಘಾಟಿಸಲಾಗಿದೆ ಎಂದರು. ಮಕ್ಕಳು ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದ್ದು, ಸದುಪಯೋಗಪಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳನ್ನು ತಂದಿದ್ದು, ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. ಮುಂದಿನ ದಿನಗಳಲ್ಲಿ ಇವುಗಳು ಲೋಕಾರ್ಪಣೆಯಾಗಲಿವೆ ಎಂದರು.
ಹಬ್ಬನಘಟ್ಟ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ, ಧರ್ಮಣ್ಣ, ಗಂಗಾಧರ, ಸ್ವಾಮಿನಾಯ್ಕ ಪ್ರಭಾನಾಯ್ಕ, ಕರೀಂ ಸಾಬ್, ಹಿರಿಯಣ್ಣ, ಹನುಮೇಗೌಡ, ಮಲದೇವಿಹಳ್ಳಿ ಮಂಜು, ಬಸವರಾಜು, ರಾಜೇಶ, ಪ್ರಾಂಶುಪಾಲೆ ಕಲ್ಪನಾ, ಶಂಕರ, ಕುಮಾರ, ಕೃಷ್ಣ, ಭಾಗವಹಿಸಿದ್ದರು.